ನವದೆಹಲಿ: ಭಾರತದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏನೇ ಬಿಗಿ ಕ್ರಮಗಳನ್ನು ಕೈಗೊಂಡಿದ್ದರೂ ಕೊರೋನಾ ವೈರಾಣು ಹರಡುವುದನ್ನು ತಡೆಯಲು ಪರಿಣಾಮಕಾರಿಯಾಗಿ ಯಶಸ್ವಿಯಾಗಿಲ್ಲ. ಈ ನಡುವೆ ದೇಶದಲ್ಲಿ ಕೊರೋನಾ ಸೋಂಕು ಯಾವ ಹಂತದಲ್ಲಿದೆ ಎಂಬ ಬಗ್ಗೆಯೂ ನಿಖರವಾದ ಮಾಹಿತಿಗಳಿಲ್ಲ. ಈ ಪರಿಸ್ಥಿತಿಯಲ್ಲಿ ಮುನ್ನೆಚ್ಚರಿಕೆಯೊಂದೇ ಮದ್ದು ಎಂಬಂತಾಗಿದೆ.
ಇವರೇ ಕರೋನವೈರಸ್ (Coronavirus) ಸೋಂಕಿತರು ಎಂದು ಸದ್ಯ ನಮಗೆ ಸುಲಭಕ್ಕೆ ತಿಳಿಯುವುದಿಲ್ಲ. ಹಂತದಲ್ಲಿ ನಿಖರವಾಗಿ ಗುರುತಿಸಲಾಗದು. ಅದನ್ನು ಪರೀಕ್ಷೆಗೊಳಪಡಿಸಿಯೇ ಪತ್ತೆ ಹಚ್ಚಬೇಕು. ಮೇಲುನೋಟಕ್ಕೆ ರೋಗ ಲಕ್ಷಣ ಕಂಡುಬರುವವರೆಗೆ ಅಂದರೆ 14 ದಿನ, ಪಕ್ಕದಲ್ಲೇ ಇರುವವರಿಗೆ ಸೋಂಕು ಇದ್ದರೂ ತಿಳಿದುಬರುವುದಿಲ್ಲ. ಆದುದರಿಂದ ಕೊರೋನಾ ಯಾವುದೇ ಹಂತದಲ್ಲಿದ್ದರೂ ನಾವು ಮಾಡಬೇಕಾಗಿರುವುದು ಏನು?
ನಿತ್ಯ ಗಂಟೆಗೊಮ್ಮೆಯಾದರೂ ಕೈ ತೊಳೆಯಲೇಬೇಕು.
ಮನೆಯಿಂದ ಹೊರಹೋಗುವುದನ್ನು ಬಿಡಬೇಕು.
ಪೇಪರು, ಹಾಲಿನ ಪ್ಯಾಕ್ ಮುಂತಾದವನ್ನು ಮುಟ್ಟಿದರೆ ಕೈತೊಳೆದುಕೊಂಡು ಮುಂದಿನ ಕೆಲಸ ಮಾಡಬೇಕು.
ಯಾರೇ ಆಗಲಿ, ಪರಿಚಿತರು, ಸ್ನೇಹಿತರು, ನೆಂಟರಿಷ್ಟರು ಎದುರಿಗೆ ಸಿಕ್ಕರೆ ಅಥವಾ ಮನೆಗೆ ಬಂದರೆ ಕನಿಷ್ಠ ಐದಾರು ಅಡಿ ದೂರದಿಂದಲೇ ಮಾತನಾಡಿಸಬೇಕು.
ಜ್ವರ, ಕೆಮ್ಮು, ಉಸಿರಾಟದ ತೊಂದರೆ ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು.
ಅವರಿಗೆ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ಕೊಡಿಸಬೇಕು.
ವಿಶೇಷವಾಗಿ ಮಕ್ಕಳು ಮತ್ತು ವೃದ್ಧರನ್ನು ಇಂಥ ವ್ಯಕ್ತಿಗಳ ಬಳಿ ಬಿಡಬಾರದು. ಮಕ್ಕಳು ಮತ್ತು ವೃದ್ಧರಿಗೆ ಬೇಗ ಸೋಂಕು ಹರಡುತ್ತದೆ.
ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಥವಾ ಟಿಸ್ಯೂ ಪೇಪರ್ ಅಡ್ಡ ಹಿಡಿದುಕೊಳ್ಳಬೇಕು.
ಕೆಮ್ಮು-ಸೀನಿನ ಎಂಜಲು ಹನಿಗಳು ಎದುರಿನವರು ಅಥವಾ ವಸ್ತುಗಳ ಮೇಲೆ ಸಿಡಿಯದಂತೆ ಎಚ್ಚರ ವಹಿಸಬೇಕು.
ಹೀಗೆ ಪ್ರತಿನಡೆಗಳ ಬಗ್ಗೆ ಎಚ್ಚರ ವಹಿಸುವ ಮೂಲಕ ಹಾಗೂ ಎಂಥದೇ ಪರಿಸ್ಥಿತಿಯಲ್ಲಿ ಮನೆಯಿಂದ ಹೊರಗೆ ಹೋಗದೇ ಇರುವ ಮೂಲಕ ನಮ್ಮನ್ನೂ ಕಾಪಾಡಿಕೊಳ್ಳಬಹುದು ಮತ್ತು ಕೊರೋನಾ COVID-19 ಎಂಬ ಮಹಾಮಾರಿ ಬೇರೆಯವರಿಗೂ ಹರಡದಂತೆ ನೋಡಿಕೊಳ್ಳಬಹುದು.
Comments are closed.