ನವದೆಹಲಿ: ಲಾಕ್ಡೌನ್ ಹಿನ್ನೆಲೆಯಲ್ಲಿ ಮೂರು ತಿಂಗಳ ಮಟ್ಟಿಗೆ ಸಾಲದ ಕಂತು ಪಾವತಿಸುವುದಿಂದ ವಿನಾಯಿತಿ ಘೋಷಿಸಿ ದೇಶದ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ಅಧಿಕೃತ ಘೋಷಣೆ ಮಾಡಿವೆ.
ಎಸ್ಬಿಐ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ಯುಕೋ ಬ್ಯಾಂಕ್ ಸೇರಿ 16 ಬ್ಯಾಂಕ್ಗಳು ಮೇ 31ರವರೆಗೆ ಸಾಲಗಳ ಮೇಲಿನ ತಿಂಗಳ ಕಂತು ಪಾವತಿಯಿಂದ ವಿನಾಯಿತಿ ಘೋಷಿಸಿವೆ. ಈ ಮೂಲಕ ಶುಕ್ರವಾರವಷ್ಟೇ ಆರ್ಬಿಐ ನೀಡಿದ್ದ ಆದೇಶಗಳನ್ನು ಜಾರಿಗೊಳಿಸಿವೆ.
ಕೊರೋನಾ ಲಾಕ್ಡೌನ್ನಿಂದ ಆರ್ಥಿಕ ಹಿಂಜರಿತ ಶುರುವಾಗುವ ಲಕ್ಷಣ ಕಂಡುಬರುತ್ತಿವೆ. ಹೀಗಾಗಿ ಕೆಲ ರಾಜ್ಯಗಳು ಸರ್ಕಾರಿ ನೌಕರರ ವೇತನ ಕಡಿತಗೊಳಿಸಲು ಮುಂದಾಗಿವೆ. ತೆಲಂಗಾಣದಲ್ಲಿ ಸರ್ಕಾರಿ ನೌಕರರು, ಜನಪ್ರತಿನಿಧಿಗಳ, ವೇತನವನ್ನು ಅರ್ಧಕ್ಕರ್ಧ ಕಡಿತ ಮಾಡಿದೆ. ಮಹಾರಾಷ್ಟ್ರದಲ್ಲೂ ಸರ್ಕಾರಿ ನೌಕರರ ಈ ತಿಂಗಳ ವೇತನ ಕಡಿತಕ್ಕೆ ಆದೇಶ ಹೊರಬಿದ್ದಿದೆ.
ಯಾವೆಲ್ಲ ಸಾಲಗಳ ಪಾವತಿ ಮುಂದೂಡಿಕೆ?
ಕೃಷಿ ಸಾಲ, ಬೆಳೆ ಸಾಲ, ವಾಹನ ಸಾಲ, ಗೃಹ ಸಾಲ, ವೈಯಕ್ತಿಕ ಸಾಲ, ಚಿಲ್ಲರೆ ಸಾಲ, ಆಭರಣ ಸಾಲ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಸಾಲ, ಕೆಲ ಬ್ಯಾಂಕ್ಗಳ ಕ್ರೆಡಿಟ್ ಕಾರ್ಡ್ ಕಂತಿನ ಪಾವತಿಗೂ ವಿನಾಯಿತಿ ಅನ್ವಯವಾಗುತ್ತದೆ.
ಸಾಲ ಪಾವತಿ ಮುಂದೂಡಿಕೆ ಹೇಗೆ?
3 ತಿಂಗಳು ಅಂದರೆ ಮೇ 31ರವರೆಗೆ ಸಾಲದ ಕಂತು ಕಟ್ಟಬೇಕಿಲ್ಲ. ಆದರೆ ಈ ಮೂರು ತಿಂಗಳ ಅವಧಿಯಲ್ಲಿ ಪ್ರತಿ ತಿಂಗಳ ಕಂತಿನ ಮೇಲೆ ಬಡ್ಡಿ ಅನ್ವಯ ಆಗುತ್ತದೆ. ಮೇ 31ರ ಬಳಿಕ ಕಂತು ಕಟ್ಟಲು ನಿರ್ಧರಿಸಿದ್ರೆ ಆಗ ಮೂರು ತಿಂಗಳ ಕಂತಿನ ಜೊತೆಗೆ ಬಡ್ಡಿಯನ್ನೂ ಒಟ್ಟಿಗೆ ಪಾವತಿಸಬೇಕಾಗುತ್ತದೆ. ಸಾಲ ಪಾವತಿ ವಿಳಂಬ ಕಾರಣಕ್ಕಾಗಿ ದಂಡಗಳನ್ನು ಹಾಕುವುದಿಲ್ಲ. ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುವುದಿಲ್ಲ.
Comments are closed.