ನವದೆಹಲಿ: ಭಾರತದಲ್ಲಿ ಕೊರೋನಾ ವೈರಸ್ ತನ್ನ ಮರಣ ಮೃದಂಗವನ್ನು ಮುಂದುವರೆಸಿದ್ದು, ರಾಜಸ್ತಾನದಲ್ಲಿ ಒಂದೇ ದಿನ ಇಬ್ಬರು ಮಹಾಮಾರಿಗೆ ಬಲಿಯಾಗಿದ್ದಾರೆ. ಇದರಂತೆ ದೇಶದಲ್ಲಿ ಸಾವಿನ ಸಂಖ್ಯೆ 63ಕ್ಕೆ ಏರಿಕೆಯಾಗಿದೆ.
ಇದೇ ಮೊದಲ ಬಾರಿಗೆ ಹರಿಯಾಣ ರಾಜ್ಯದಲ್ಲಿ ವೈರಸ್’ಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದು, ಚಂಡೀಗಢದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 67 ವರ್ಷದ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆಂದು ಅಂಬಾಲಾದ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಕುಲದೀಪ್ ಸಿಂಗ್ ಅವರು ಹೇಳಿದ್ದಾರೆ.
ಇನ್ನು ರಾಜಸ್ತಾನದಲ್ಲಿಯೂ 52 ವರ್ಷದ ವ್ಯಕ್ತಿಯೊಬ್ಬರು ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮೃತ ವ್ಯಕ್ತಿ ಶ್ರೀಲಂಕಾದಿಂದ ಭಾರತಕ್ಕೆ ಬಂದಿದ್ದರು. ಮಾರ್ಚ್ 19 ರಂದು ಆಸ್ಪತ್ರೆಗೆ ದಾಖಲಾಗಿದ್ದ ಇವರಲ್ಲಿ ವೈರಸ್ ದೃಢಪಟ್ಟಿದ್ದು. ಇದೀಗ ಅವರ ಕುಟುಂಬ ಸದಸ್ಯರನ್ನೂ ಪರೀಕ್ಷೆಗೊಳಪಡಿಸಲಾಗಿದ್ದು, ಎಲ್ಲರಲ್ಲೂ ವೈರಸ್ ಇರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದೀಗ ಇದೇ ರಾಜ್ಯದಲ್ಲಿ 82 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಆಳ್ವಾರ್ ಮೂಲದ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಿದುಳು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಈ ನಡುವೆ ಅರುಣಾಚಲ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ವ್ಯಕ್ತಿಯೊಬ್ಬರಲ್ಲಿ ವೈರಸ್ ಕಂಡು ಬಂದಿದೆ. ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯಲ್ಲಿ ಇದೀಗ ವೈರಸ್ ದೃಢಪಟ್ಟಿದೆ ಎನ್ನಲಾಗುತ್ತಿದೆ.
ಇದರಂತೆ ಮುಂಬೈನ ಧರವಿ ಪ್ರದೇಶದ ನಿವಾಸಿಯಾಗಿದ್ದ 45 ವರ್ಷದ ವ್ಯಕ್ತಿಯೊಬ್ಬರು ಬುಧವಾರ ಸಂಜೆ ಬಲಿಯಾಗಿದ್ದು, ವ್ಯಕ್ತಿ ಸಾವನ್ನಪ್ಪಿದ್ದ ಪ್ರದೇಶ ಹಾಗೂ ಸ್ಥಳದಲ್ಲಿದ್ದ ಅಂಗಡಿಗಳೆಲ್ಲವನ್ನೂ ಬಂದ್ ಮಾಡಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
Comments are closed.