ರಾಷ್ಟ್ರೀಯ

ಶ್ರಾದ್ಧದಲ್ಲಿ 1,500 ಮಂದಿ ಭಾಗಿ: 12 ಮಂದಿ ಕೊರೊನಾ ಸೋಂಕಿತರು!

Pinterest LinkedIn Tumblr


ಮೊರೆನಾ: ದುಬೈನಿಂದ ಮರಳಿದ ವ್ಯಕ್ತಿಯೊಬ್ಬ ತನ್ನ ತಾಯಿಯ ಶ್ರಾದ್ಧ ಕಾರ್ಯಕ್ರಮ ಏರ್ಪಡಿಸಿ 1,500 ಮಂದಿಯನ್ನು ಆಹ್ವಾನಿಸಿ ಔತಣಕೂಟ ಏರ್ಪಡಿಸಿದ್ದ ಸಂಗತಿ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತಬ್ಲಿಘಿ ಜಮಾತ್‌ನಂತೆ ಮೊರೆನಾ ಹೊಸ ಕೊರೊನಾ ವೈರಸ್‌ ಹಾಟ್‌ಸ್ಪಾಟ್‌ ಆಗುವ ಆತಂಕ ಕಾಣಿಸಿಕೊಂಡಿದೆ.

ರಾಷ್ಟ್ರಾದ್ಯಂತ ಕೊರೊನಾ ವೈರಸ್‌ ಎಚ್ಚರಿಕೆ, ವಿದೇಶದಿಂದ ವಾಪಸಾದವರು ಹೋಂ ಕ್ವಾರಂಟೈನ್‌ನಲ್ಲಿ ಇರಬೇಕು ಎಂಬ ಸಲಹೆಗಳ ನಡುವೆ ತಾಯಿ ಸಾವಿಗೆ ಗೌರವಾರ್ಪಣೆ ನೆಪದಲ್ಲಿ 1,500 ಮಂದಿಯನ್ನು ಆಹ್ವಾನಿಸಿ ಮತ್ತೊಂದು ತಬ್ಲಿಘಿ ಜಮಾತ್‌ ದುರಂತ ಮರುಕಳಿಸುವಂತೆ ಮಾಡಿದ್ದಾರೆ.

ಶ್ರಾದ್ಧ ಏರ್ಪಡಿಸಿದ್ದ ವ್ಯಕ್ತಿಯು ಸೇರಿದಂತೆ ಆತನ ಕುಟುಂಬದ 11 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಇದೀಗ ಸ್ಥಳೀಯ ಆಡಳಿತವು ಶ್ರಾದ್ಧ ಕಾರ್ಯಕ್ರಮ ನಡೆದ ಸ್ಥಳ ಸೇರಿದಂತೆ ಸಂಪೂರ್ಣ ಕಾಲೋನಿಗೆ ಸೀಲ್‌ ಹಾಕಿದೆ.

ದುಬೈ ಹೋಟೆಲ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್‌, ಮಾರ್ಚ್‌ 17ರಂದು ಮೊರೆನಾಗೆ ಆಗಮಿಸಿದ್ದರು. ಮಾರ್ಚ್‌ 20ಕ್ಕೆ ತಾಯಿಯ ಶ್ರಾದ್ಧ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಇದಕ್ಕೆ ಸುಮಾರು 1,500 ಮಂದಿಯನ್ನು ಆಹ್ವಾನಿಸಿದ್ದರು. ಮಾರ್ಚ್‌ 25ರಂದು ಕೊರೊನಾ ಸೋಂಕಿಗೆ ಸಂಬಂಧಿಸಿದ ಲಕ್ಷಣಗಳು ಕಾಣಿಸಿಕೊಂಡಿತ್ತು. ನಾಲ್ಕು ದಿನಗಳ ಬಳಿಕ ಆಸ್ಪತ್ರೆ ಭೇಟಿ ನೀಡಿದ್ದರು. ಸುರೇಶ್‌ ಮತ್ತು ಅವರ ಪತ್ನಿ ಇಬ್ಬರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಇಬ್ಬರಿಗೂ ಕೊರೊನಾ ವೈರಸ್‌ ಇರುವುದು ದೃಢ ಪಟ್ಟಿದೆ.

ಸುರೇಶ್‌ ಅವರನ್ನು ಸಂಪರ್ಕಿಸಿದವರು ಮತ್ತು ಸಂಬಂಧಿಕರು ಸೇರಿ 23 ಮಂದಿಗೆ ಕೊರೊನಾ ಸೋಂಕು ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 10 ಮಂದಿಯ ವರದಿ ಪಾಸಿಟಿವ್‌ ಬಂದಿದೆ.

” ಇಬ್ಬರು ಕೊರೊನಾ ಸೋಂಕಿತರನ್ನು ಸಂಪರ್ಕಿಸಿದ 23 ಮಂದಿಯ ಮಾದರಿಯನ್ನು ಕೊರೊನಾ ವೈರಸ್‌ ಪರೀಕ್ಷೆಗೆ ಕಳುಹಿಸಲಾಗಿತ್ತು. ಶುಕ್ರವಾರ ಫಲಿತಾಂಶದ ವರದಿ ಬಂತು. 23 ಮಂದಿಯ ಪೈಕಿ 8 ಮಹಿಳೆಯರು ಸೇರಿ 10 ಮಂದಿಗೆ ಕೊರೊನಾ ವೈರಸ್‌ ಇರುವುದು ಸ್ಪಷ್ಟವಾಗಿದೆ. ನೆಗೆಟಿವ್‌ ವರದಿ ಬಂದಿರುವ ಉಳಿದವರನ್ನು 14 ದಿನಗಳ ಕಾಲ ಮೊರೆನಾ ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ” ಎಂದು ಮೊರೊನಾ ಜಿಲ್ಲೆಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಆರ್‌ಸಿ ಬಂದಿಲ್‌ ತಿಳಿಸಿದ್ದಾರೆ.

ದುಬೈನಿಂದ ವಾಪಸಾದಾಗ ಸುರೇಶ್‌ ಅವರನ್ನು ಪರೀಕ್ಷಿಸಲಾಗಿತ್ತು. ಆದರೆ ಅವರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿರಲಿಲ್ಲ. ಮೊರೆನಾಗೆ ಆಗಮಿಸುವ ಎರಡು ದಿನಗಳ ಮೊದಲು ತಮ್ಮ ಪತ್ನಿಗೆ ಅನಾರೋಗ್ಯವಿತ್ತು ಎಂದು ಸುರೇಶ್‌ ತಿಳಿಸಿದ್ದಾರೆ.

Comments are closed.