ಆಗ್ರಾ: ಲಾಕ್ಡೌನ್ನಿಂದಾಗಿ ದೇಶಾದ್ಯಂತ ಜನರೆಲ್ಲರೂ ತಂತಮ್ಮ ಮನೆಯೊಳಗೆ ಬಂಧಿಯಾಗಿದ್ದಾರೆ ಎಂದ ಮಾತ್ರಕ್ಕೆ ಅಪರಾಧಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ನಮ್ಮ ದೇಶದಲ್ಲಿ ಹಣ, ಆಸ್ತಿಗಾಗಿ ನಡೆಯುವ ಕೊಲೆಗಿಂತಲೂ ಅನೈತಿಕ ಸಂಬಂಧದ ಕಾರಣದಿಂದ ನಡೆಯುವ ಕೊಲೆಯ ಪ್ರಕರಣಗಳೇ ಹೆಚ್ಚು. ಮದುವೆಗಿಂತ ಮುಂಚೆಯಷ್ಟೇ ಅಲ್ಲದೆ, ಮದುವೆಯಾದ ನಂತರವೂ ಅಕ್ರಮ ಸಂಬಂಧಗಳು ಮುಂದುವರೆಯುವುದರಿಂದ ಎಷ್ಟೋ ಕುಟುಂಬಗಳು ಛಿದ್ರವಾದ ಉದಾಹರಣೆಗಳು ಸಾಕಷ್ಟಿವೆ.
ಗಂಡೇ ಆಗಿರಲಿ, ಹೆಣ್ಣೇ ಆಗಿರಲಿ. ಒಮ್ಮೆ ತನ್ನ ಪ್ರೇಮಿ ಅಥವಾ ಜೊತೆಗಾರನ ಮೇಲೆ ತಿರಸ್ಕಾರ ಶುರುವಾದರೆ ಆ ಒಲವು ಬೇರೊಬ್ಬರ ಮೇಲೆ ತಿರುಗುತ್ತದೆ. ಅದರಿಂದ ಸಂಸಾರ ಬೀದಿಗೆ ಬೀಳುತ್ತದೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಆಗಿದ್ದೂ ಅದೇ. ಪ್ರೇಮಸೌಧವಾದ ತಾಜಮಹಲ್ ಇರುವ ಸ್ಥಳವಾಗಿರುವ ಆಗ್ರಾದಲ್ಲಿ ಅನೈತಿಕ ಸಂಬಂಧದಿಂದಾಗಿ ಹೆಂಡತಿಯೇ ತನ್ನ ಗಂಡನ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ವಿಕ್ರಮ್ ಠಾಕೂರ್ ಮತ್ತು ರವೀನಾ ಇಬ್ಬರೂ ಇಷ್ಟಪಟ್ಟೇ ಮದುವೆಯಾಗಿದ್ದರು. ಇಬ್ಬರಿಗೂ ಒಂದೂವರೆ ವರ್ಷದ ಮಗ ಕೂಡ ಇದ್ದ. ಆದರೆ, ಇತ್ತೀಚೆಗೆ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಜಾಸ್ತಿಯಾಗಿತ್ತು. ಇದೇವೇಳೆ ರವೀನಾಗೆ ತನ್ನ ಕಸಿನ್ ಪ್ರತಾಪ್ ಬಗ್ಗೆ ಮನಸಾಗಿತ್ತು. ಆಗ್ರಾದ ಬಳಿ ಇರುವ ಖಂಡ ಎಂಬ ಗ್ರಾಮದಲ್ಲಿ ನಡೆದ ಘಟನೆಯಿದು.
ತನ್ನೂರಿಗೆ ವಾಪಾಸ್ ಬಂದಿದ್ದ ವಿಕ್ರಂ ಠಾಕೂರ್ಗೆ ತನ್ನ ಹೆಂಡತಿ ಮತ್ತು ಪ್ರತಾಪ್ ನಡುವಿನ ಅಕ್ರಮ ಸಂಬಂಧದ ಸುಳಿವು ಸಿಕ್ಕಿತ್ತು. ಇದರಿಂದ ಆತನನ್ನು ಕೊಲೆ ಮಾಡಲು ನಿರ್ಧರಿಸಿದ ರವೀನಾ ಅದಕ್ಕಾಗಿ ತನ್ನ ಪ್ರಿಯಕರ ಪ್ರತಾಪ್ ಸಹಾಯ ಪಡೆದಳು. ಅಂದು ರಾತ್ರಿ ವಿಕ್ರಂ ಒಬ್ಬನೇ ಮನೆಯಲ್ಲಿದ್ದಾಗ ನಡುರಾತ್ರಿ ಎರಡೂವರೆಗೆ ಆತನ ಕತ್ತು ಸೀಳಿದ ರವೀನಾ ತನ್ನ ಗಂಡನ ಹೆಣವನ್ನು ಸಾಗಿಸಲು ಪಕ್ಕದ ಬೀದಿಯ್ಲಲಿದ್ದ ಪ್ರತಾಪ್ನ ಸಹಾಯ ಪಡೆದಳು.
ಮನೆಯಿಂದ ಸ್ವಲ್ಪ ದೂರದಲ್ಲಿ ವಿಕ್ರಂನ ಶವವನ್ನು ಹಾಕಿದ ರವೀನಾ ತನ್ನ ಗಂಡ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ಈ ಬಗ್ಗೆ ತನಿಖೆ ನಡೆಸಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಕ್ರಂನ ಮೃತದೇಹ ಪತ್ತೆಯಾಗಿತ್ತು. ಇದು ಉದ್ದೇಶಪೂರ್ವವಾಗಿ ಮಾಡಿರುವ ಕೊಲೆ ಎಂಬುದು ಮೇಲ್ನೋಟಕ್ಕೆ ಖಚಿತವಾಗಿದ್ದರಿಂದ ಪೊಲೀಸರು ರವೀನಾಳನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಸತ್ಯಸಂಗತಿ ಬೆಳಕಿಗೆ ಬಂದಿತು.
Comments are closed.