ನವದೆಹಲಿ: ಮಾರಕ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ನಿನ್ನೆಯ 9 ಗಂಟೆ 9 ನಿಮಿಷ ಯಶಸ್ಸು ಈ ಸಾಂಕ್ರಾಮಿಕ ಮಾರಿಯ ವಿರುದ್ಧದ ನಮ್ಮ ಸುದೀರ್ಘ ಯುದ್ದದ ಜವಾಬ್ದಾರಿ ಹೆಚ್ಚಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟ ದೇಶದ ಜನತೆ ನಿನ್ನೆ ರಾತ್ರಿ 9 ಗಂಟೆಗೆ ಮನೆಯ ದೀಪಗಳನ್ನು ಆರಿಸಿ 9 ನಿಮಿಷ ಹಣತೆ ಹಚ್ಚೆ ಒಗ್ಗಟ್ಟು ಪ್ರದರ್ಶಿಸಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮಾತನಾಡಿರುವ ಪ್ರಧಾನಿ ಮೋದಿ, ದೇಶ ಮಾತ್ರವಲ್ಲದೇ ಇಡೀ ದೇಶವೇ ಕಠಿಣ ಪರಿಸ್ಥಿತಿಯಲ್ಲಿರುವ ಈ ಹೊತ್ತಿನಲ್ಲಿ ಬಿಜೆಪಿ ಸಂಸ್ಥಾಪನಾ ದಿನ ಕೂಡ ಬಂದಿದೆ. ಮಾನವೀಯತೆ ಅತ್ಯಂತ ದೊಡ್ಡ ಸಮಸ್ಯೆ ಎದುರಿಸುತ್ತಿದ್ದು, ದೇಶ ಸೇವೆಯ ಬಗೆಗಿನ ನಮ್ಮ ಭಕ್ತಿ ಈ ಸವಾಲಿನ ಸಮಯದಲ್ಲಿ ನಮ್ಮ ಹಾದಿಯನ್ನು ತೋರಿಸುತ್ತದೆ. ಕಠಿಣ ಪರಿಸ್ಥಿತಿಯನ್ನು ಭಾರತ ಎದುರಿಸುವ ಕ್ರಮವನ್ನು ನೋಡಿ ಭಾರತೀಯರ ಮಾತ್ರವಲ್ಲದೇ ವಿಶ್ವಆರೋಗ್ಯಸಂಸ್ಥೆ ಕೂಡ ಶ್ಲಾಘಿಸುತ್ತಿದೆ. ಈ ಮಹಾಮಾರಿಯನ್ನು ಹೊಡೆದೋಡಿಸಲು ವಿಶ್ವದ ಎಲ್ಲ ರಾಷ್ಟ್ರಗಳೂ ಕೈ ಜೋಡಿಸಬೇಕು. ಈ ಹೋರಾಟದಲ್ಲಿ ಭಾರತ ಅತ್ಯಂತ ಸಕ್ರಿಯವಾಗಿದ್ದು, ಸಾರ್ಕ್ ಮತ್ತು ಜಿ20 ದೇಶಗಳೊಡನೆ ಕೂಡಿ ಚರ್ಚೆ ನಡೆಸಿದೆ ಎಂದು ಹೇಳಿದರು.
ಕೊರೋನಾ ವೈರಸ್ ನ ಸೂಕ್ಷ್ಮ ಮತ್ತು ಅದು ಸೃಷ್ಟಿಸುವ ಭೀಕರತೆಯನ್ನು ಮನಗಂಡು ಅದನ್ನು ನಿಯಂತ್ರಿಸುವುದಕ್ಕಾಗಿ ಕಠಿಣ ನಿರ್ವಹಣಾ ಯೋಜನೆ ರೂಪಿಸಿ ಅದನ್ನು ಜಾರಿಗೆ ತಂದಿದೆ. ಕೊರೋನಾ ವಿರುದ್ಧ ಭಾರತ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಂಡು ಮಾರಕ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತಿದೆ. ಭಾರತ ಕೈಗೊಂಡ ನಿರ್ಣಯಗಳು ಇತರೆ ದೇಶಗಳಿಗೆ ಮಾದರಿಯಾಗಿದ್ದು, ಇದರ ಫಲಿತಾಂಶ ಕೂಡ ಉತ್ತಮವಾಗಿದೆ. ಭಾರತದಂತಹ ಅತೀ ದೊಡ್ಡ ಮತ್ತು ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶದಲ್ಲಿ ಲಾಕ್ ಡೌನ್ ಹೇರಲಾಗಿದೆ. ಈ ಸಂದರ್ಭದಲ್ಲಿ ದೇಶದ ಜನತೆ ತೋರಿಸುತ್ತಿರುವ ಪ್ರಬುದ್ಧತೆ ಅಭೂತಪೂರ್ವವಾದದ್ದು. ಇಂತಹ ದೊಡ್ಡ ದೇಶದಲ್ಲಿ ಲಾಕ್ ಡೌನ್ ನಿಯಮಳನ್ನು ಜನರು ಇಷ್ಟು ವಿಧೇಯತೆ ಮತ್ತು ಪ್ರಜ್ಞೆಯಿಂದ ಅನುಸರಿಸುತ್ತಾರೆಂದು ಯಾರೂ ಊಹಿಸಿರಲಿಲ್ಲ. ದೇಶದ ಜನತೆ ನಮ್ಮ ಮೇಲೆ ಇಟ್ಟಿರುವ ನಂಬಿಕೆ ದೊಡ್ಡದು.
ಮಾರಕ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ನಿನ್ನೆಯ 9ಗಂಟೆ9ನಿಮಿಷ ಯಶಸ್ಸು ಈ ಸಾಂಕ್ರಾಮಿಕ ಮಾರಿಯ ವಿರುದ್ಧದ ನಮ್ಮ ಸುದೀರ್ಘ ಯುದ್ದದ ಜವಾಬ್ದಾರಿ ಹೆಚ್ಚಿಸಿದೆ. 130 ಕೋಟಿ ಭಾರತೀಯ ದೀಪ ಹಚ್ಚುವ ಮೂಲಕ ದೇಶದ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ದೇಶದ ಪ್ರತೀಯೊಂದು ವಲಯ, ಜಾತಿ, ಧರ್ಮ, ಸಮುದಾಯದ ಜನರು ದೀಪ ಹಚ್ಚಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಮಹಾಮಾರಿಯನ್ನು ಸೋಲಿಸುವ ವರೆಗೂ ನಾವು ಈ ಸಾಮೂಹಿಕ ಯುದ್ಧದಲ್ಲಿ ಬಸವಳಿಯಬಾರದು ಮತ್ತು ಯಾವುದೇ ರೀತಿಯ ವಿಶ್ರಾಂತಿ ಪಡೆಯಬಾರದು. ನಮ್ಮ ನಿರಂತರ ಹೋರಾಟದ ಮೂಲಕ ಗೆಲುವ ಸಾಧಿಸಬೇಕು. ಈಗ ದೇಶದ ಮುಂದೆ ಒಂದೇ ಗುರಿ ಮತ್ತು ಒಂದೇ ಶತ್ರು ಕಾಣುತ್ತಿದ್ದು ಅದನ್ನು ಮಣಿಸಲೇಬೇಕು ಎಂದು ಮೋದಿ ಹೇಳಿದರು.
ಈ ಮಹಾಮಾರಿ ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಆರೋಗ್ಯ ಸೇತು ಆ್ಯಪ್ ತಯಾರಿಸಿದ್ದು, ನಾನು ಈ ಮೂಲಕ ಪ್ರತೀಯೊಬ್ಬ ಭಾರತೀಯನಿಗೂ ಮನವಿ ಮಾಡಿಕೊಳ್ಳುತ್ತೇನೆ. ಇದನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಇದನ್ನು ಡೌನ್ ಲೋಡ್ ಮಾಡುವ ವ್ಯಕ್ತಿ ಇತರೆ 40 ಮಂದಿಗೆ ಹೇಳಿ ಇದನ್ನು ಡೌನ್ ಲೋಡ್ ಮಾಡಿಕೊಳ್ಳುವಂತೆ ಪ್ರೇರೇಪಿಸಿ. ಅವರು ಮತ್ತೆ 40 ಮಂದಿಗೆ ಹೇಳಲಿ. ಆ ಮೂಲಕ ಇಡೀ ದೇಶವೇ ಈ ಆ್ಯಪ್ ಮೂಲಕ ಕೊರೋನಾ ವೈರಸ್ ನಿಯಂತ್ರಣದ ಕುರಿತು ಮಾಹಿತಿ ಸಿಗಲಿದೆ. ನಿಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಷ್ಟು ಮಂದಿಗೆ ಸೋಂಕು ತಗುಲಿದೆ. ಸೋಂಕಿನ ನಿರ್ವಹಣೆ ಹೇಗೆ. ಸೋಂಕು ತಗುಲದಂತೆ ಮುಂಜಾಗ್ರತೆ ಹೇಗೆ ವಹಿಸಬೇಕು ಎಂಬಿತ್ಯಾದಿ ಮಾಹಿತಿಗಳು ಈ ಆ್ಯಪ್ ನಲ್ಲಿ ಲಭ್ಯವಾಗಲಿದೆ.
ಸಾಧ್ಯವಾದಷ್ಟೂ ಮನೆಯಲ್ಲೇ ಇರಿ. ಮನೆಯಿಂದ ಹೊರಗೆ ಹೋಗುವುದು ಅನಿವಾರ್ಯವಾದರೆ ಹೊರಗೆ ಹೋಗುವಾಗ ನಿಮ್ಮ ಮುಖವನ್ನು ಕರ್ಚೀಫ್ ಅಥವಾ ಮಾಸ್ಕ್ ನಿಂದ ಮುಚ್ಚಿಕೊಳ್ಳಿ. ಸಾಧ್ಯವಾದರೆ ಮನೆಯಲ್ಲೂ ಇದೇ ರೀತಿ ಮುಂಜಾಗ್ರತೆ ವಹಿಸಿ. ಆ ಮೂಲಕ ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿಟ್ಟುಕೊಳ್ಳಿ. ಆಗಾಗ ಕೈಗಳನ್ನು ಸೋಪ್ ಅಥವಾ ಹ್ಯಾಂಡ್ ವಾಶ್ ಹಾಕಿ ಚೆನ್ನಾಗಿ ತೊಳೆದುಕೊಳ್ಳಿ. ಹಣ್ಣು ಮತ್ತು ತರಕಾರಿಗಳನ್ನು ತೊಳೆದು ಬಳಕೆ ಮಾಡಿ. ಶಿಸ್ತಿನ ಜೀವನ ಅಳವಡಿಸಿಕೊಳ್ಳಿ. ಇದೇ ಮಂತ್ರವನ್ನು ಇಡೀ ವಿಶ್ವ ಇದೀಗ ಪಾಲಿಸುತ್ತಿದೆ.
ಈ ಹಿಂದೆ ಯುದ್ಧವಾದಾಗ ನಮ್ಮ ಸೋಹದರಿಯರು ಮತ್ತು ತಾಯಂದಿರು ಅವರ ಬಳಿ ಇದ್ದ ಒಡವೆಗಳನ್ನು ನೀಡಿ ಯುದ್ಧಕ್ಕೆ ಬಲ ತುಂಬುತ್ತಿದ್ದರು. ಈಗಿನ ಪರಿಸ್ಥಿತಿ ಕೂಡ ಯುದ್ಧಕ್ಕಿಂತ ಏನೂ ಕಡಿಮೆ ಇಲ್ಲ. ಇದು ಮಾನವೀಯತೆಯನ್ನು ರಕ್ಷಿಸುವು ವಿಶ್ವ ಯುದ್ಧವಾಗಿದೆ. ವೈರಸ್ ಸೋಂಕು ನಿರ್ವಹಣೆಗಾಗಿ ತೆರೆಯಲಾಗಿರುವ ಪಿಎಂ ಕೇರ್ಸ್ ಫಂಡ್ ಗೆ ಧಾರಾಳವಾಗಿ ಹಣ ಸಹಾಯ ಮಾಡಿ. ನಾನು ನನ್ನ ಬಿಜೆಪಿ ಕಾರ್ಯಕರ್ತರಿಗೆ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ, ನೀವು ದೇಣಿಗೆ ನೀಡಿ. ಇತರೆ 40 ಮಂದಿಗೆ ದೇಣಿಗೆ ನೀಡುವಂತೆ ಪ್ರೇರೇಪಿಸಿ ಅವರೂ ಕೂಡ 40 ಮಂದಿದೆ ದೇಣಿಗೆ ನೀಡುವಂತೆ ಪ್ರೇರೇಪಿಸಲಿ. ಆ ಮೂಲಕ ವೈದ್ಯಕೀಯ ವ್ಯವಸ್ಥೆಯನ್ನು ಬಲಪಡಿಸಿ ಆ ಮಾರಕ ವೈರಸ್ ಅನ್ನು ಸೋಲಿಸಲು ನೆರವಾಗಿ ಎಂದು ಮೋದಿ ಹೇಳಿದರು.
Comments are closed.