ಹೊಸದಿಲ್ಲಿ: ಕೊರೊನಾ ವೈರಸ್ ಕ್ಷಿಪ್ರ ಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಏಕಾಏಕಿ ಲಾಕ್‌ಡೌನ್ ಘೋಷಣೆ ಮಾಡಲಾಗಿತ್ತು. ಇದರಿಂದಾಗಿ ದೂರದ ಊರುಗಳಿಂದ ಬಂದು ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಕೆಲಸ ಮಾಡುವ ದಿನಗೂಲಿ ವಲಸೆ ಕಾರ್ಮಿಕರು ಅತಿ ಹೆಚ್ಚು ನರಕಯಾತನೆ ಅನುಭವಿಸುವಂತಾಗಿದೆ.
ವರದಿಯೊಂದರ ಪ್ರಕಾರ ಕೊರೊನಾ ವೈರಸ್ ಲಾಕ್‌ಡೌನ್‌ನಿಂದಾಗಿ 100ಕ್ಕೂ ಹೆಚ್ಚು ಮಂದಿ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ.
ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದ ಬೆನ್ನಲ್ಲೇ ಮಾರ್ಚ್ 25ರಂದು ಪ್ರಧಾನ ಮಂತ್ರಿ ಮೂರು ವಾರಗಳ ಲಾಕ್‌ಡೌನ್ ಘೋಷಣೆ ಮಾಡಿದ್ದರು. ಅಲ್ಲದೆ ದೇಶದ ಪ್ರತಿಯೊಬ್ಬ ಪ್ರಜೆಯಲ್ಲೂ ಎಲ್ಲಿ ಉಳಿದುಕೊಂಡಿರುವಿರೋ ಅಲ್ಲೇ ಇರುವಂತೆಯೇ ವಿನಂತಿ ಮಾಡಿದ್ದರು.
ದೇಶದಲ್ಲಿ ಏಪ್ರಿಲ್ 14ರ ವರೆಗೆ ಲಾಕ್‌ಡೌನ್ ಘೋಷಿಸಿದ ಪರಿಣಾಮ ಸಾರಿಗೆ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಅಗತ್ಯ ಸೇವೆಗಳನ್ನು ನಿಲುಗಡೆಗೊಳಿಸಲಾಯಿತು. ಇದರಿನಂದಾಗಿ ದಿನಗೂಲಿ ವಲಸೆ ಕಾರ್ಮಿಕರು ಅನ್ಯ ದಾರಿಯಿಲ್ಲದೆ ಸಾವಿರಾರು ಸಂಖ್ಯೆಯಲ್ಲಿ ಗಂಟು ಮೂಟೆ ಕಟ್ಟಿಕೊಂಡು ತಮ್ಮ ತಮ್ಮ ಊರುಗಳಿಗೆ ಪಾಲಾಯನ ಮಾಡಲು ಆರಂಭಿಸಿದರು. ಹಣ ಹಾಗೂ ಆಹಾರದ ಕೊರತೆಯಿಂದಾಗಿ ಬರಿಗಾಲಲ್ಲಿ ಊರಿಗೆ ಬೆಂಡತ್ತಿದರು.
ಹಳ್ಳಿಗಳಿಗೆ ತೆರಳಿದವರನ್ನು ಆಯಾ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಸಾಮೂಹಿಕ ಸ್ಯಾನಿಟೈಸರ್ ಹಾಗೂ ಕ್ಲೋರಿನೇಟಡ್ ಸ್ಥಾನಕ್ಕೆ ಒಳಪಡಿಸಲಾಯಿತು. ಆದರೆ ಬಹುತೇಕರಿಗೆ ತಮ್ಮ ಗಮ್ಯಸ್ಥಾನವನ್ನು ತಲುಪಲು ಸಾಧ್ಯವಾಗಲಿಲ್ಲ.
ಬಲ್ಲ ಮೂಲಗಳ ವರದಿ ಪ್ರಕಾರ ಲಾಕ್‌ಡೌನ್‌ನಿಂದಾಗಿ 100ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಹಲವರು ಗಾಯಕ್ಕೆ ತುತ್ತಾಗಿದ್ದಾರೆ.
ಇಲ್ಲೊಂದು ಹೃದಯ ವಿದ್ರಾಯಕ ಘಟನೆಯೊಂದರಲ್ಲಿ ದಿಲ್ಲಿಯಿಂದ ಆಗ್ರಾಗೆ ಬರಿಗಾಲಲ್ಲಿ ನಡಿಗೆಯ ಮೂಲಕ 200 ಕೀ.ಮೀ.ಗಳಷ್ಟು ದೂರ ಸಂಚರಿಸಿದ್ದ 39ರ ಹರೆಯದ ವ್ಯಕ್ತಿಯೊಬ್ಬರು ಸಾವಿಗೆ ಶರಣಾಗಿದ್ದರು. ಖಾಸಗಿ ರೆಸ್ಟೋರೆಂಟ್‌ನಲ್ಲಿ ಹೋಮ್ ಡೆಲಿವರಿ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇದೀಗ ಮೂವರು ಮಕ್ಕಳನ್ನು ಅಗಲಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಸಿದು ಬಿದ್ದ ಇವರು ಇಹಲೋಕ ತ್ಯಜಿಸಿದರು.
ಇದು ಕೇವಲ ಓರ್ವ ವ್ಯಕ್ತಿಗೆ ಎದುರಾದ ದುರ್ಗತಿಯಲ್ಲ. ಅನೇಕರು ಕೊರೊನಾ ವೈರಸ್ ಲಾಕ್‌ಡೌನ್‌ಗೆ ಬಲಿಪಶುಗಳಾಗಿದ್ದಾರೆ.
ಒಟ್ಟಿನಲ್ಲಿ ಕೊರೊನಾ ವೈರಸ್ ತಂದಿತ್ತಿರುವ ದುರಂತ ಅಷ್ಟಿಷ್ಟಲ್ಲ. ಇದು ಸೋಂಕು ಭಾದಿಸಿದವರಿಗೆ ಮಾತ್ರವಲ್ಲದೆ ದೇಶದ ಬೆನ್ನಲುಬು ಆಗಿರುವ ದಿನಗೂಲಿ ಕಾರ್ಮಿಕರು ಸೇರಿದಂತೆ ಜನ ಸಾಮಾನ್ಯರ ಜೀವನವನ್ನು ನರಕಯಾತನೆಗೆ ಸಮಾನವಾಗಿಸಿದೆ. ಬಡವರು ಒಂದು ತುತ್ತಿನ ಆಹಾರಕ್ಕಾಗಿ ಪರಿತಪಿಸುವಂತಾಗಿದೆ.
ವಿಶ್ವ ಸಂಸ್ಥೆಯು ಈಗಾಗಲೇ ಆರ್ಥಿಕ ಹಿಂಜರಿತದ ಎಚ್ಚರಿಕೆ ನೀಡಿದ್ದು, ಕಡುಬಡತನವನ್ನು ಎದುರಿಸುವ ಭೀತಿಯಲ್ಲಿದೆ ಎಂಬುದಾಗಿ ತಿಳಿಸಿದೆ. ಈ ನಿಟ್ಟಿನಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಸರಕಾರ ಹಾಗೂ ಅಧಿಕಾರಿಗಳಿಗೂ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕಿದೆ.
Comments are closed.