ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಇದರಿಂದ ಕೊರೋನಾ ವೈರಸ್ ಸೋಂಕಿತರ ಏರಿಕೆ ಪ್ರಮಾಣ ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.
ದೇಶದಲ್ಲಿ ಲಾಕ್ ಡೌನ್ ಜಾರಿಗೊಳಿಸುವ ಮುನ್ನ ಕೇವಲ 3.4 ದಿನದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆಯು ಡಬಲ್ ಆಗುತ್ತಿತ್ತು. ಈಗ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಲು 7.5 ದಿನಗಳು ಬೇಕಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಅವರು ಹೇಳಿದ್ದಾರೆ.
ಏಪ್ರಿಲ್ 19 ರ ಮಾಹಿತಿಯ ಪ್ರಕಾರ, 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರಾಷ್ಟ್ರೀಯ ಸರಾಸರಿ ಡಬಲ್ ಆಗುವ ಪ್ರಮಾಣದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ ಎಂದು ಲವ ಅಗರವಾಲ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣವಾಗುವ ಸಮಯ 20 ದಿನಗಳಿಗಿಂತ ಕಡಿಮೆ ಇದೆ. ದೆಹಲಿಯಲ್ಲಿ 8.5 ದಿನಗಳಲ್ಲಿ ದ್ವಿಗುಣವಾದರೆ, ಕರ್ನಾಟಕದಲ್ಲಿ 9.2 ದಿನ, ತೆಲಂಗಾಣದಲ್ಲಿ 9.4 ದಿನಗಳು, ಆಂಧ್ರಪ್ರದೇಶ 10.6 ದಿನಗಳು, ಜಮ್ಮು ಮತ್ತು ಕಾಶ್ಮೀರ 11.5 ದಿನಗಳು, ಪಂಜಾಬ್ 13.1 ದಿನಗಳು, ಛತ್ತೀಸ್‌ಗಢದಲ್ಲಿ h 13.3 ದಿನಗಳು, ತಮಿಳುನಾಡು 14 ದಿನಗಳು ಮತ್ತು ಬಿಹಾರದಲ್ಲಿ 16.4 ದಿನಗಳು ಬೇಕಾಗುತ್ತಿದೆ ಎಂದು ಅಗರವಾಲ್ ಹೇಳಿದ್ದಾರೆ.
ಕೊವಿಡ್ ಬಾಧಿತರು ಗುಣಮುಖರಾಗುತ್ತಿರುವ ಸಂಖ್ಯೆ ಮತ್ತು ಸಾವಿನ ಸಂಖ್ಯೆಯ ಅನುಪಾತದಲ್ಲಿ ಭಾರತದ ಸ್ಥಿತಿಯು ಹಲವು ದೇಶಗಳಿಗಿಂತ ಉತ್ತಮವಾಗಿದೆ. ಶೇ. 80ರಷ್ಟು ಕೊರೋನಾ ಸೋಂಕಿತರು ಗುಣಮುಖರಾಗುತ್ತಿದ್ದಾರೆ. ಶೇ 20ರಷ್ಟು ಪ್ರಕರಣಗಳಲ್ಲಿ ಮಾತ್ರ ಸಾವು ವರದಿಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1553 ಪಾಸಿಟಿವ್ ಕೇಸ್ ಮತ್ತು 36 ಸಾವಿನ ಪ್ರಕರಣ ದಾಖಲಾಗಿದ್ದು, ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 17265ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
Comments are closed.