ನವದೆಹಲಿ: ರ‍್ಯಾಪಿಡ್ ಪರೀಕ್ಷಾ ಕಿಟ್ಗಳ ಬಗ್ಗೆ ಹಲವು ದೂರುಗಳು ಕೇಳಿಬರುತ್ತಿರುವ ನಡುವೆ ಮುಂದಿನ ಎರಡು ದಿನಗಳ ಕಾಲ ಈ ರ‍್ಯಾಪಿಡ್ ಪರೀಕ್ಷಾ ಕಿಟ್ಗಳನ್ನು ಬಳಸದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ರಾಜ್ಯಗಳಿಗೆ ಮಂಗಳವಾರ ಸಲಹೆ ನೀಡಿದೆ. ಐಸಿಎಂಆರ್ ತಂಡಗಳು ಈ ಉಪಕರಣಗಳ ಮೌಲ್ಯಮಾಪನ ನಡೆಸಿದ ಬಳಿಕ ಈ ಸಲಹೆ ನೀಡಿದೆ.
ದೇಶದಲ್ಲಿ ಕೊರೋನಾ ವೈರಸ್ ಸ್ಥಿತಿಗತಿ ಬಗ್ಗೆ ಪ್ರತಿದಿನ ಸರ್ಕಾರ ಮಾಹಿತಿ ನೀಡುತ್ತಿದೆ. ಐಸಿಎಂಆರ್ನ ಡಾ. ರಮಣ್ ಆರ್ ಗಂಗಾಖೇಡ್ಕರ್ ಅವರು ದೋಷಪೂರಿತ ರ್ಯಾಪಿಡ್ ಪರೀಕ್ಷಾ ಕಿಟ್ಗಳ ಬಗ್ಗೆ ಮಾತನಾಡಿದ್ದಾರೆ.
ರ‍್ಯಾಪಿಡ್ ಪರೀಕ್ಷಾ ಕಿಟ್ ಬಗ್ಗೆ ನೆನ್ನೆ ಒಂದು ರಾಜ್ಯದಿಂದ ದೂರು ಬಂದಿದೆ. ಹಾಗೂ ಈವರೆಗೂ ಮೂರು ರಾಜ್ಯಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ರ‍್ಯಾಪಿಡ್ ಪರೀಕ್ಷಾ ಕಿಟ್ ಮತ್ತು ಆರ್-ಪಿಸಿಆರ್ ಕಿಟ್ ಫಲಿತಾಂಶದಲ್ಲಿ ಸಾಕಷ್ಟು ವ್ಯತ್ಯಾಸವಾಗಿರುವುದು ವರದಿಯಾಗಿದೆ. ಹೀಗಾಗಿ ಮುಂದಿನ ಎರಡು ದಿನಗಳ ಕಾಲ ಈ ಪರೀಕ್ಷಾ ಕಿಟ್ಗಳನ್ನು ಬಳಸದಂತೆ ರಾಜ್ಯಗಳಿಗೆ ನಾವು ಸಲಹೆ ನೀಡುತ್ತಿದ್ದೇವೆ ಎಂದು ಹೇಳಿದರು.
ಈ ಕಿಟ್ಗಳನ್ನು ಪರೀಕ್ಷೆ ನಡೆಸಬೇಕಾಗಿದೆ ಮತ್ತು ನಮ್ಮ ತಂಡಗಳು ಅವುಗಳ ಮೌಲ್ಯಮಾಪನ ನಡೆಸಲಿದ್ದಾರೆ. ಈ ವಿಷಯದಲ್ಲಿ ಇನ್ನು ಎರಡು ದಿನದಲ್ಲಿ ಅಂತಿಮ ಸಲಹೆ ನೀಡಲಾಗುವುದು. ಒಂದು ವೇಳೆ ಪರೀಕ್ಷಾ ಕಿಟ್ಗಳಲ್ಲಿ ಲೋಪ-ದೋಷ ಕಂಡುಬಂದಲ್ಲಿ ಅವುಗಳನ್ನು ಬದಲಿಸುವಂತೆ ಕಂಪನಿಗಳಿಗೆ ಹೇಳಲಾಗುದು ಎಂದು ತಿಳಿಸಿದರು.
ಮಂಗಳವಾರದವರೆಗೆ ಒಟ್ಟು 4,49,810 ಮಾದರಿಗಳನ್ನು ಕೋವಿಡ್-19 ಪರೀಕ್ಷೆಗೆ ಸಂಗ್ರಹಿಸಲಾಗಿದೆ. ಸೋಮವಾರದೊಳಗೆ 35,852 ಮಾದರಿಗಳನ್ನು ಪರೀಕ್ಷೆ ಮುಗಿಸಲಾಗಿದೆ. ಐಸಿಎಂಆರ್ನ 201 ಲ್ಯಾಬ್ಗಳಲ್ಲಿ 29,776 ಮಾದರಿಗಳು ಹಾಗೂ 86 ಖಾಸಗಿ ಪ್ರಯೋಗಾಲಯಗಳಲ್ಲಿ 6,076 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ ಎಂದು ಗಂಗಾಖೇಡ್ಕರ್ ಮಾಹಿತಿ ನೀಡಿದರು.
ಭಾರತದಲ್ಲಿ ಈವರೆಗೂ 18,985 ಜನರು ಸೋಂಕಿನಿಂದ ಬಳಲುತ್ತಿದ್ದು, ಒಟ್ಟು 603 ಜನರು ಮೃತಪಟ್ಟಿದ್ದಾರೆ. 3260 ಪ್ರಕರಣಗಳು ಗುಣಮುಖವಾಗಿದ್ದು, 15,122 ಪ್ರಕರಣಗಳು ಚಿಕಿತ್ಸೆಯಲ್ಲಿವೆ. ಕಳೆದ 24 ಗಂಟೆಯಲ್ಲಿ 1329 ಪ್ರಕರಣಗಳು ವರದಿಯಾಗಿದ್ದು, 44 ಜನರು ಅಸುನೀಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
Comments are closed.