ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಜೊತೆಗೆ ಬುಧವಾರ ಮಾಡಿಕೊಂಡಿರುವ ಒಪ್ಪಂದದ ನಂತರ ರಿಲಾಯನ್ಸ್ ಗ್ರೂಪ್ ಮಾಲೀಕ ಮುಖೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಒಳಗಾಗಿದ್ದಾರೆ.
ಅಮೆರಿಕದ ದೈತ್ಯ ಸಾಮಾಜಿಕ ಜಾಲತಾಣ ಸಂಸ್ಥೆಯಾದ ಫೇಸ್‌ಬುಕ್ ಭಾರತದ ರಿಲಾಯನ್ಸ್ ಜಿಯೋ ಸಂಸ್ಥೆಯ ಶೇ 9.99 ರಷ್ಟು ಷೇರುಗಳನ್ನು ಸುಮಾರು 43,574 ಕೋಟಿ ರೂ ನೀಡಿ ಖರೀದಿಸಿದೆ. ಈ ಬಂಡವಾಳ ಹೂಡಿಕೆ ಒಪ್ಪಂದದ ನಂತರ ಅಂಬಾನಿ ಆಸ್ತಿ ಮೌಲ್ಯ 49.2 ಬಿಲಿಯನ್ ಡಾಲರ್‌ಗೆ ಏರಿಕೆ ಕಂಡಿದೆ.
ಬ್ಲೂಮ್‌ಬರ್ಗ್ ಬಿಲಿಯನೇರ್‌ಗಳ ಸೂಚ್ಯಂಕದ ಪ್ರಕಾರ, ಮುಖೇಶ್ ಅಂಬಾನಿ ಇದೀಗ ಚೀನಾದ ಜ್ಯಾಕ್ ಮಾ ಗಿಂತ ಸುಮಾರು 3.2 ಬಿಲಿಯನ್ ಡಾಲರ್ ನಷ್ಟು ಹೆಚ್ಚು ಆಸ್ತಿ ಹೊಂದಿದ್ದು ಏಷ್ಯಾ ಖಂಡದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದೆನಿಸಿಕೊಂಡಿದ್ದಾರೆ
ಫೇಸ್‌ಬುಕ್ 2014ರಲ್ಲಿ ವಾಟ್ಸಾಪ್ ಅನ್ನು ಖರೀದಿಸಿದ ನಂತರದ ಅತಿದೊಡ್ಡ ಬಂಡವಾಳ ಹೂಡಿಕೆ ಇದಾಗಿದೆ. ಭಾರತದಲ್ಲಿ ರಿಲಾಯನ್ಸ್‌ನ ಎಲ್ಲಾ ಡಿಜಿಟಲ್ ಸೇವೆಗಳನ್ನು ಒಂದೇ ವೇದಿಕೆಯ ಅಡಿಯಲ್ಲಿ ತರಲು 2019ರಲ್ಲಿ ಜಿಯೋ ಪ್ಲಾಟ್‌ಫಾರ್ಮ್ ಅನ್ನು ಅರಂಭಿಸಲಾಗಿತ್ತು.
ಇದೀಗ ಫೇಸ್‌ಬುಕ್ ಹೂಡಿಕೆಯಿಂದಾಗಿ ಜಿಯೋ ಮಾರುಕಟ್ಟೆ ಮೌಲ್ಯವು 4.62 ಲಕ್ಷ ಕೋಟಿಗೆ ಏರಿಕೆ ಕಂಡಿದೆ. ಅಲ್ಲದೆ, ರಿಲಾಯನ್ಸ್ ಜೊತೆ ಫೇಸ್‌ಬುಕ್ ಮತ್ತು ವಾಟ್ಸಾಪ್ ಒಂದಾಗಿ ಭಾರತದ ಎಲ್ಲಾ ಡಿಜಿಟಲ್ ಸೇವೆಯನ್ನೂ ಒಂದೇ ವೇದಿಕೆಯ ಅಡಿಯಲ್ಲಿ ತರುವುದು ಈ ಒಪ್ಪಂದದ ಮೂಲ ಉದ್ದೇಶ ಎನ್ನಲಾಗುತ್ತಿದೆ.
ವಿಶ್ವದ ಅತಿದೊಡ್ಡ ತೈಲ ಸಂಸ್ಕರಣಾ ಘಟಕವನ್ನು ಹೊಂದಿರುವ ಮುಖೇಶ್ ಅಂಬಾನಿ ಬುಧವಾರ ಈ ಒಪ್ಪಂದ ನಡೆಯುವವರೆಗೆ 2020ರ ಸೂಚ್ಯಾಂಕದಲ್ಲಿ 14 ಬಿಲಿಯನ್ ಡಾಲರ್‌ನಷ್ಟು ನಷ್ಟ ಅನುಭವಿಸಿದ್ದರು. ಇದನ್ನು ಏಷ್ಯಾದ ಯಾವುದೇ ವ್ಯಕ್ತಿಯ ಅತಿದೊದ್ದ ಕುಸಿತ ಎಂದೇ ಪರಿಗಣಿಸಲಾಗಿತ್ತು. ಆದರೆ, ಫೇಸ್‌ಬುಕ್ ಜೊತೆಗಿನ ಹೊಸ ಒಪ್ಪಂದ ರಿಲಾಯನ್ಸ್ ಮಾರುಕಟ್ಟೆಯಲ್ಲಿ ಹೊಸ ಉತ್ಸಾಹವನ್ನು ಹೆಚ್ಚಿಸಿದೆ ಎನ್ನಲಾಗುತ್ತಿದೆ.ಜಿಯೋ ಜೊತೆಗಿನ ಸಹಭಾಗಿತ್ವದಿಂದಾಗಿ ಜುಕರ್‌ಬರ್ಗ್ ಭಾರತದಲ್ಲಿ ಡಿಜಿಟಲ್ ವೇದಿಕೆಯನ್ನು ಅನ್ನು ಮತ್ತಷ್ಟು ವಿಸ್ತರಿಸಬಹುದು. ಆನ್‌ಲೈನ್ ಪಾವತಿ ಮತ್ತು ಇ-ಕಾಮರ್ಸ್ ವೇಗವಾಗಿ ಬೆಳೆಯುತ್ತಿರುವ ಭಾರತದಂತಹ ದೇಶದಲ್ಲಿ ಫೇಸ್‌ಬುಕ್ ತನ್ನ ವಿಸ್ತರಣೆಯನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಈ ಮೂಲಕ ಇ-ಕಾಮರ್ಸ್ ವಹಿವಾಟು ಆರಂಭಿಸಿ ಅಮೇಜಾನ್ ಮತ್ತು ವಾಲ್ಮಾರ್ಟ್‌ಗೆ ಸೆಡ್ಡು ಹೊಡೆಯುವುದು ಈ ಒಪ್ಪಂದದ ಗುರಿ.
ಅರ್ಧ ಶತಕೋಟಿ ಇಂಟರ್ನೆಟ್ ಬಳಕೆದಾರನ್ನು ಹೊಂದಿರುವ ಭಾರತ ಅಮೆಜಾನ್, ಆಪಲ್ ಇಂಕ್, ಮೈಕ್ರೋಸಾಫ್ಟ್ ಕಾರ್ಪ್, ಆಲ್ಫಾಬೆಟ್ ಮತ್ತು ಗೂಗಲ್ ಸೇರಿದಂತೆ ವಿಶ್ವದ ಅತಿದೊಡ್ಡ ತಂತ್ರಜ್ಞಾನ ಕಂಪನಿಗಳಿಗೆ ಪ್ರಮುಖ ಮಾರುಕಟ್ಟೆಯಾಗಿದೆ. ಫೇಸ್‌ಬುಕ್ ಸಹ ಭಾರತದಲ್ಲಿ ಸುಮಾರು 250 ದಶಲಕ್ಷ ಬಳಕೆದಾರರನ್ನು ಹೊಂದಿದೆ. ವಾಟ್ಸಾಪ್ 400 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವುದು ಈ ಒಪ್ಪಂದಕ್ಕೆ ಸಹಕಾರಿಯಾಗಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
Comments are closed.