ರಾಷ್ಟ್ರೀಯ

ಕೊರೋನಾ ವೈರಸ್‌ ಗೆ ದೇಶದಲ್ಲಿ ಸಾವಿನ ಸಂಖ್ಯೆ 723ಕ್ಕೇರಿಕೆ; ವಿಶ್ವಾದ್ಯಂತ 1.9 ಲಕ್ಷ ಮಂದಿ ಸಾವು

Pinterest LinkedIn Tumblr


ನವದೆಹಲಿ(ಏ. 24): ಭಾರತದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 37 ಮಂದಿ ಅಸುನೀಗಿದ್ಧಾರೆ. 1,752 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ದೇಶದಲ್ಲಿ ಈವರೆಗೆ ಕೊರೋನಾದಿಂದ ಮೃತ ಪಟ್ಟವರ ಸಂಖ್ಯೆ 723ಕ್ಕೆ ಏರಿದೆ. ಸೋಂಕಿರ ಸಂಖ್ಯೆ 23,452 ತಲುಪಿದೆ. 4,813 ಮಂದಿ ಗುಣಮುಖರಾಗಿರುವ ಹಿನ್ನೆಲೆಯಲ್ಲಿ ಕೊರೊನಾ ಆ್ಯಕ್ಟಿವ್ ಕೇಸ್​ಗಳ ಸಂಖ್ಯೆ 17,915 ಆಗಿದೆ.

ಭಾರತದಲ್ಲಿ ಕೊರೋನಾ ಸೋಂಕಿನ ವೇಗ ಅಪಾಯಕಾರಿ ಮಟ್ಟಕ್ಕೇರಿಲ್ಲ ಎಂದು ಸರ್ಕಾರ ಹೇಳುತ್ತಿದೆ. ದೇಶಾದ್ಯಂತ 15 ಜಿಲ್ಲೆಗಳಲ್ಲಿ ಕಳೆದ 28 ದಿನಗಳಲ್ಲಿ ಒಂದೂ ಕೊರೊನಾ ಪ್ರಕರಣ ದಾಖಲಾಗಿಲ್ಲ. 80 ಜಿಲ್ಲೆಗಳಲ್ಲಿ ಕಳೆದ 14 ದಿನಗಳಿಂದ ಯಾವುದೇ ಹೊಸ ಕೊರೊನಾ ಸೋಂಕು ಪ್ರಕರಣ ಬೆಳಕಿಗೆ ಬಂದಿಲ್ಲ. ಭಾರತದಲ್ಲಿ ಚೇತರಿಕೆ ಪ್ರಮಾಣ ಶೇ. 20ರಷ್ಟಿದೆ.

ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯ ಪ್ರದೇಶದಲ್ಲಿ ಅತಿ ಹೆಚ್ಚು ಸಾವಾಗಿದೆ. ಈ ಮೂರು ರಾಜ್ಯಗಳಲ್ಲೇ 478 ಜನರು ಮೃತಪಟ್ಟಿದ್ಧಾರೆ. ಇನ್ನು, ಕೊರೋನಾ ಸೋಂಕಿನ ಪ್ರಮಾಣದಲ್ಲಿ ಮಹಾರಾಷ್ಟ್ರವೇ ಮುಂಚೂಣಿಯಲ್ಲಿದೆ. ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ದೆಹಲಿ, ಗುಜರಾತ್ ರಾಜ್ಯಗಳಲ್ಲಿ 1 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಇನ್ನು, ಜಾಗತಿಕ ಲೆಕ್ಕಾಚಾರದಲ್ಲಿ ಭಾರತ 16ನೇ ಸ್ಥಾನದಲ್ಲಿದೆ. ವಿಶ್ವಾದ್ಯಂತ 27 ಲಕ್ಷ ಜನರಿಗೆ ಸೋಂಕು ತಗುಲಿದೆ. ಸಾವಿನ ಸಂಖ್ಯೆ 1.92 ಲಕ್ಷ ಮುಟ್ಟಿದೆ.

ಅಮೆರಿಕವೊಂದರಲ್ಲೇ 50 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇಲ್ಲಿ 8.86 ಲಕ್ಷ ಪ್ರಕರಣಗಳು ದಾಖಲಾಗಿವೆ. ಕೊರೋನಾ ಸೋಂಕಿನ ಬಾಧೆಯಲ್ಲಿ ಅಮೆರಿಕವೇ ಮುಂಚೂಣಿಯಲ್ಲಿದೆ. ಈಗಲೂ ಇಲ್ಲಿ 15 ಸಾವಿರ ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ.

Comments are closed.