ರಾಷ್ಟ್ರೀಯ

ದೇಶದಲ್ಲಿ ಒಂದೇ ದಿನ ಅತಿಹೆಚ್ಚು ಜನರಿಗೆ ಕೊರೋನಾ ಸೋಂಕು ಹರಡಿದ್ದು ಯಾವಾಗ?

Pinterest LinkedIn Tumblr


ನವದೆಹಲಿ: ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಮಹಾಮಾರಿ‌ ಕರೋನಾವೈರಸ್ (Coronavirus) ಭಾರತಕ್ಕೆ ಕಾಲಿಟ್ಟಾಗಿನಿಂದ ದಿನವೊಂದರಲ್ಲಿ ಅತಿ ಹೆಚ್ಚು ಜನರಲ್ಲಿ ಸೋಂಕು ಕಂಡುಬಂದ ದಾಖಲೆ ನಿನ್ನೆಯಾಗಿದೆ. ನಿನ್ನೆ (ಭಾನುವಾರ) ಒಂದೇ ದಿನ ಭಾರತದಲ್ಲಿ 1.975 ಜನರಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ.

ಚೀನಾದ ವುಹಾನ್ ಪ್ರಾಂತ್ಯದಲ್ಲಿ ಜನ್ಮತೆಳೆದ ಮಾರಕ‌ ಕೊರೋನಾ ವೈರಸ್ ಭಾರತಕ್ಕೆ ಕಾಲಿಟಿದ್ದು ಈ ವರ್ಷದ ಜನವರಿ 30ರಂದು. ಅಂದು ಕೇರಳದಲ್ಲಿ ಮೊದಲ ಪ್ರಕರಣ ಕಂಡುಬಂದಿತ್ತು. ಅಂದಿನಿಂದ ನಿನ್ನೆಯವರೆಗೆ ಕೊರೋನಾ ವೈರಸ್ ಹರಡಿದ ಮಾಹಿತಿ ನೋಡಿದರೆ ದಿನವೊಂದರಲ್ಲಿ ಅತಿ ಹೆಚ್ಚು ಹರಡಿದ್ದು ನಿನ್ನೆಯೇ. ನಿನ್ನೆ ಒಂದೇ ದಿನ 1,975 ಜನರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ.

ಇದರಿಂದ ನಿನ್ನೆ ಸಂಜೆ 5ಗಂಟೆವರೆಗಿನ ದೇಶದ ಕೊರೋನಾ ಪೀಡಿತರ ಸಂಖ್ಯೆ 26,917ಕ್ಕೆ ಏರಿಕೆಯಾಗಿದೆ‌. ಆ ಪೈಕಿ 5.913 ಮಂದಿ ಮಾತ್ರ ಗುಣಮುಖರಾಗಿದ್ದಾರೆ. ಉಳಿದಂತೆ ದೇಶಾದ್ಯಂತ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 826ಕ್ಕೆ ಏರಿಕೆಯಾಗಿದೆ.

ಹೀಗೆ ಏರುಮುಖವಾಗಿ ಸಾಗುತ್ತಿರುವ ಕೊರೋನಾ ವೈರಸ್​ ಕೋವಿಡ್-19 (Covid-19) ಹರಡುವಿಕೆಯನ್ನು ತಡೆಯಲೆಂದು ತರಲಾದ ಲಾಕ್​ಡೌನ್​ ಅನ್ನು ಮೇ 3ರ ಬಳಿಕ ಮುಂದುವರೆಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಸಭೆಯಲ್ಲಿ ಕೂಲಂಕಶವಾಗಿ ಚರ್ಚಿಸಿ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಜಾಗತಿಕ ಪಿಡುಗಾಗಿರುವ‌ ಕೊರೊನಾ ವೈರಸ್ ಭಾರತದಲ್ಲಿ ಕಂಡುಬಂದ ಬಳಿಕ ಸೋಂಕು ಹರಡುವಿಕೆ ತಡೆಗಟ್ಟುವ ಬಗ್ಗೆ, ಅದಕ್ಕೆಂದೇ ಲಾಕ್​ಡೌನ್ (Lockdown)​ ಜಾರಿಗೊಳಿಸುವ ಬಗ್ಗೆ ಮತ್ತು ಲಾಕ್​ಡೌನ್ ಅನ್ನು ವಿಸ್ತರಿಸುವ ಬಗ್ಗೆ ಪ್ರಧಾನಿ ಮೋದಿ ಈಗಾಗಲೇ ಮೂರು ಬಾರಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿದ್ದಾರೆ. ಇಂದು ಬೆಳಗ್ಗೆ 10ಗಂಟೆಗೆ ನಾಲ್ಕನೇ ವಿಡೀಯೋ ಕಾನ್ಫರೆನ್ಸ್ ನಡೆಯಲಿದೆ.

ಸಭೆಯಲ್ಲಿ ಯಾವ್ಯಾವ ರಾಜ್ಯಗಳಲ್ಲಿ ಕೊರೋನಾ ಸೋಂಕು ಹರಡುವಿಕೆ ಪ್ರಮಾಣ ಹೇಗೇಗಿದೆ? ಕೊರೋನಾ ತಡೆಗಟ್ಟಲು ಏನೇನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ? ಈ ಹಂತದಲ್ಲಿ ಲಾಕ್​ಡೌನ್ ಅನ್ನು ಮುಂದುವರೆಸಬೇಕೋ ಅಥವಾ ತೆರವುಗೊಳಿಸಬೇಕೋ? ಈಗಾಗಲೇ ಗುರುತಿಸಲ್ಪಟ್ಟಿರುವ ಹಸಿರು, ಹಳದಿ ಮತ್ತು ಕೆಂಪು ವಲಯಗಳಲ್ಲಿ ಅಲ್ಲಿನ ಪರಿಸ್ಥಿತಿಗಳಿಗನುಗುಣವಾಗಿ ವಿನಾಯಿತಿ ನೀಡಬೇಕೋ? ಬೇಡವೋ? ಅಂತರರಾಜ್ಯ ಸಾಗಾಣೆಗೆ ಅವಕಾಶ ನೀಡಬೇಕೋ? ಬೇಡವೋ ಎಂಬ ಹತ್ತು ಹಲವು ವಿಷಯಗಳು ಚರ್ಚೆ ಆಗಲಿವೆ. ಕಳೆದ ಬಾರಿಯಂತೆ ಈ ಸಲವೂ ಸುದೀರ್ಘ ಚರ್ಚೆಯಾಗುವ ಸಂಭವವಿದೆ.

ಕೇಂದ್ರದ ಹಣಕಾಸು ಇಲಾಖೆಯ ಕಾರ್ಯಪಡೆ, ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳು, ‌ಆರ್ಥಿಕ ಕ್ಷೇತ್ರದ ತಜ್ಞರು, ಉದ್ಯಮ ಕ್ಷೇತ್ರದವರು ದೇಶದ ಆರ್ಥಿಕತೆಯ ದೃಷ್ಟಿಯಿಂದ ಲಾಕ್​ಡೌನ್ ಅನ್ನು ಮುಕ್ತಾಯಗೊಳಿಸಬೇಕು. ಮೇ 3ಕ್ಕೆ 40 ದಿನ ಆಗಲಿದ್ದು ಇದಕ್ಕಿಂತ ಹೆಚ್ಚು ದಿನ ದೇಶವನ್ನು ಸ್ಥಗಿತಗೊಳಿಸುವುದು ಸೂಕ್ತವಾದ ಕ್ರಮವಲ್ಲ ಎಂದು ಸಲಹೆ ನೀಡಿದ್ದಾರೆ.

ಆದರೆ ಲಾಕ್​ಡೌನ್ ಸೇರಿ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಕೊರೋನಾ ವೈರಸ್ ನಿಯಂತ್ರಣಕ್ಕೆ ಬಂದಿಲ್ಲ. ಆದುದರಿಂದ ಲಾಕ್​ಡೌನ್ ಅನ್ನು ವಿಸ್ತರಿಸುವುದೇ ಸೂಕ್ತ ಎಂದು ದೆಹಲಿ, ಪಂಜಾಬ್​, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಒಡಿಶಾ, ತಮಿಳುನಾಡು ರಾಜ್ಯಗಳು ಅಭಿಪ್ರಾಯ ಮಂಡಿಸುವ ಸಾಧ್ಯತೆ ಇದೆ.

ಹೀಗೆ ಎರಡೂ ರೀತಿಯ ಸಲಹೆ-ಶಿಫಾರಸ್ಸುಗಳು ಬರುತ್ತಿದ್ದು ಅಂತಿಮವಾಗಿ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಹಿಂದೆ ಮಾರ್ಚ್ 24ರಿಂದ ಏಪ್ರಿಲ್ 14ರವರೆಗೆ ಮೊದಲ ಹಂತದಲ್ಲಿ ಮತ್ತು ಆನಂತರ ಏಪ್ರಿಲ್ 14ರಿಂದ ಮೇ 3ರವರೆಗೆ ಎರಡನೇ ಹಂತದಲ್ಲಿ ಲಾಕ್​ಡೌನ್ ಘೋಷಣೆ ಮಾಡಲಾಗಿತ್ತು. ಮಧ್ಯೆ ಏಪ್ರಿಲ್ 20ರಿಂದ ಹಸಿರು ವಲಯಗಳಲ್ಲಿ ಲಾಕ್​ಡೌನಿನ ಕೆಲ ನಿಯಮಗಳನ್ನು ಸಡಿಲಿಸಲಾಗಿತ್ತು‌‌. ಕೃಷಿ, ಹೈನುಗಾರಿಕೆ, ಮೀನುಗಾರಿಕೆ ಜೊತೆಗೆ ಕೈಗಾರಿಕೆಗಳಿಗೂ ವಿನಾಯಿತಿ ನೀಡಲಾಗಿತ್ತು.

Comments are closed.