ರಾಷ್ಟ್ರೀಯ

ಕೊರೋನಾ ವೈರಸ್ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ ನೀಡಲು ಮುಂದಾದ ಗುಜರಾತ್

Pinterest LinkedIn Tumblr


ಅಹ್ಮದಾಬಾದ್: ಮಾರಕ ಕೊರೋನಾ ವೈರಸ್ ನ ಔಷಧಿಗಾಗಿ ಇಡೀ ವಿಶ್ವವೇ ರೇಸ್ ನಲ್ಲಿ ಮುಳುಗಿದ್ದರೆ, ಇತ್ತ ಗುಜರಾತ್ ರಾಜ್ಯದಲ್ಲಿ ಮೊದಲ ಬಾರಿಗೆ ಕೊರೋನಾ ವೈರಸ್ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ ನೀಡಲಾಗುತ್ತಿದೆ.

ಹೌದು.. ಈ ಹಿಂದೆ ದೇಶದ ಸಾಕಷ್ಟು ಆಯುರ್ವೇದ ತಜ್ಞರು ಕೊರೋನಾ ವೈರಸ್ ಗೆ ಆಯುರ್ವೇದದಲ್ಲಿ ಔಷಧಿ ಇದೆ ಎಂದು ಹೇಳಿದ್ದರು. ಇದೇ ವಿಚಾರವಾಗಿ ಕೇಂದ್ರ ಆಯುಷ್ ಇಲಾಖೆ ಕೂಡ ಕೊರೋನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ ನೀಡುವ ಸಕಾರಾತ್ಮಕ ಮಾತುಗಳನ್ನಾಡಿತ್ತು. ಇದರ ಬೆನ್ನಲ್ಲೇ ಇದೀಗ ಗುಜರಾತ್ ಸರ್ಕಾರ ತನ್ನ ರಾಜ್ಯದಲ್ಲಿ ಕೊರೋನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ ನೀಡಲು ಮುಂದಾಗಿದೆ.

ಮೂಲಗಳ ಪ್ರಕಾರ ಕೊರೋನಾ ವೈರಸ್ ಹಾಟ್ ಸ್ಪಾಟ್ ಆಗಿರುವ ಅಹ್ಮದಾಬಾದ್ ನಲ್ಲಿ ಸುಮಾರು 75 ಕೊರೋನಾ ಸೋಂಕಿತರಿಗೆ ಆಯುರ್ವೇದ ಔಷಧಿ ನೀಡಲು ನಿರ್ಧರಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕೊರೋನಾ ವೈರಸ್ ಲಕ್ಷಣಗಳೇ ಇಲ್ಲದ, ಸಾಮಾನ್ಯರಂತಿರುವ ಕೊರೋನಾ ಸೋಂಕಿತರ ಮೇಲೆ ಈ ಆಯುರ್ವೇದ ಔಷಧಿ ಪ್ರಯೋಗ ನಡೆಸಲು ಗುಜರಾತ್ ಸರ್ಕಾರ ನಿರ್ಧರಿಸಿದೆ. ಆ ಮೂಲಕ ಕೊರೋನಾ ಸೋಂಕಿತರ ಮೇಲೆ ಆಯುರ್ವೇದ ಔಷಧಿ ಎಷ್ಟರ ಮಟ್ಟಿಗೆ ಮತ್ತು ಎಷ್ಟು ದಿನಗಳಲ್ಲಿ ತನ್ನ ಪರಿಣಾಮ ಬೀರಲಿದೆ. ಆಯುರ್ವೇದ ಔಷಧದಿಂದ ಸೋಂಕಿತ ಎಷ್ಟರ ಮಟ್ಟಿಗೆ ಗುಣಮುಖನಾಗುತ್ತಾನೆ. ಆತನ ಮೇಲೆ ಔಷಧಿ ಯಾವೆಲ್ಲಾ ಪರಿಣಾಮ ಬೀರುತ್ತದೆ ಎಂಬುದನ್ನು ತಜ್ಞರು ಅಧ್ಯಯನ ನಡೆಸಲಿದ್ದಾರೆ. ಇಲಾಖೆಯ ಈ ಕಾರ್ಯಕ್ಕೆ ಕೇಂದ್ರ ಸರ್ಕಾರ ಕೂಡ ಅನುಮತಿ ನೀಡಿದೆ ಎಂದು ಆಯುಷ್ ಇಲಾಖೆಯ ಪ್ರಧಾನ ಕಾರ್ಯದರ್ಶಿ (ಆರೋಗ್ಯ) ಜಯಂತಿ ರವಿ ಹೇಳಿದ್ದಾರೆ.

ಚಿಕಿತ್ಸೆ ವೇಳೆ ಸೋಂಕಿತರಿಗೆ ಸಂಶಾಮ್ನಿ ವಟಿ, ದಶಮೂಲ ಕ್ವಾತ್, ತ್ರಿಕಟು ಚೂರ್ಣ, ಮತ್ತು ತುಳಸಿ, ಬೇವು, ಅರಿಶಿನಗಳಿಂದ ತಯಾರಿಸಿದ ಔಷಧಿಯನ್ನು ನೀಡಲಾಗುತ್ತದೆ ಎಂದೂ ಜಯಂತಿ ರವಿ ಮಾಹಿತಿ ನೀಡಿದ್ದಾರೆ. ಇದಲ್ಲದೆ, ಅಂತೆಯೇ ಗುಜರಾತ್ ಆಯುಷ್ ಇಲಾಖೆ ವತಿಯಿಂದ ರಾಜ್ಯದಲ್ಲಿ ಸುಮಾರು 1.26 ಕೋಟಿ ಜನರ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧಿಯನ್ನು ಉಚಿತವಾಗಿ ನೀಡಲು ಇಲಾಖೆ ನಿರ್ಧರಿಸಿದೆ.

ಇನ್ನು ಗುಜರಾತ್ ನಲ್ಲಿ ಈ ವರೆಗೂ ಸೋಂಕಿತರ ಸಂಖ್ಯೆ 2,167ಕ್ಕೆ ಏರಿಕೆಯಾಗಿದ್ದು, 102 ಸೋಂಕಿತರು ಸಾವನ್ನಪ್ಪಿದ್ದಾರೆ. ಅಂತೆಯೇ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ 7,778 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಇವರೆಲ್ಲರಿಗೂ ಆಯುರ್ವೇದ ಔಷಧಿ ನೀಡಲಾಗುತ್ತಿದ್ದು, ಈ ಪೈಕಿ ಕೇವಲ 21 ಮಂದಿಯಲ್ಲಿ ಮಾತ್ರ ಕೊರೋನಾ ಸೋಂಕು ಕಾಣಿಸಿಕೊಂಡಿದೆ.

Comments are closed.