ರಾಷ್ಟ್ರೀಯ

ಭಾರತದಲ್ಲಿ ಸಿಲುಕಿದ್ದ 195 ಪಾಕ್ ಪ್ರಜೆಗಳು ಸ್ವದೇಶಕ್ಕೆ

Pinterest LinkedIn Tumblr


ಹೊಸದಿಲ್ಲಿ: ಕೊರೊನಾ ವೈರಸ್ ಲಾಕ್‌ಡೌನ್ ದೇಶದಲ್ಲಿ ಮೇ 17ರ ವರೆಗೆ ವಿಸ್ತರಿಸಲಾಗಿದೆ. ಇದರಿಂದಾಗಿ 10 ರಾಜ್ಯಗಳಲ್ಲಾಗಿ ಸಿಕ್ಕಿ ಬಿದ್ದಿರುವ 195ರಷ್ಟು ಪಾಕಿಸ್ತಾನ ಪ್ರಜೆಗಳನ್ನು ಮೇ 5ರಂದು ಅಟ್ಟಾರಿ-ವಾಘಾ ಗಡಿಯ ಮೂಲಕ ಸ್ವದೇಶಕ್ಕೆ ಹಿಂತಿರುಗಿಸಲಾಗುವುದು ಎಂಬುದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.

ಇದರಂತೆ ಪಾಕಿಸ್ತಾನ ಪ್ರಜೆಗಳ ಪ್ರಯಾಣಕ್ಕೆ ಅನಕೂಲವಾಗುವಂತೆ ಕ್ರಮಗಳನ್ನು ಕೈಗೊಳ್ಳುವಂತೆ ಆಯಾ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸಲಹೆಯನ್ನು ಕೊಡಲಾಗಿದೆ.

ಪಾಕಿಸ್ತಾನ ಪ್ರಜೆಗಳು ಮೇ 5 ಮಂಗಳವಾರದಂದು ಅಟ್ಟಾರಿ-ವಾಘಾ ಗಡಿಯನ್ನು ತಲುಪುವಂತೆ ತಿಳಿಸಲಾಗಿದೆ. ಬಳಿಕ ತಪಾಸಣಾ ಕೇಂದ್ರದಲ್ಲಿ ಇಮಿಗ್ರೇಷನ್ ಔಪಚಾರಿಕತೆಯನ್ನು ಪೂರೈಸಿ ಪಾಕಿಸ್ತಾನಕ್ಕೆ ಹಿಂತಿರುಗಿಸಲಾಗುವುದು.

ಬಲ್ಲ ಮೂಲಗಳ ಪ್ರಕಾರ, ಪ್ರಜೆಗಳ ಸಂಚಾರಕ್ಕೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನ ರಾಯಭಾರಿ ಕಚೇರಿ ಭಾರತವನ್ನು ಕೋರಿತ್ತು ಎಂಬುದು ತಿಳಿದು ಬಂದಿದೆ.

ಈಗಾಗಲೇ ಏಪ್ರಿಲ್ ತಿಂಗಳಲ್ಲಿ ದಿಲ್ಲಿ, ಹರಿಯಾಣ, ಪಂಜಾಬ್ ಹಾಗೂ ಉತ್ತರಪ್ರದೇಶದಲ್ಲಿ ಉಳಿದುಕೊಂಡಿದ್ದ ಪಾಕಿಸ್ತಾನ ಪ್ರಜೆಗಳನ್ನು ರವಾನಿಸಲಾಗಿತ್ತು. ಆದರೆ ಈ ಭಾರಿ 195ರಷ್ಟು ಪಾಕ್ ಪ್ರಜೆಗಳನ್ನು ಹಿಂತಿರುಗಿಸಲಾಗುತ್ತಿದೆ.

ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಗುಜರಾತ್, ರಾಜಸ್ತಾನ, ಛತ್ತೀಸಗಢ, ಹರಿಯಾಣ, ಪಂಜಾಬ್ ಹಾಗೂ ದಿಲ್ಲಿ ರಾಜ್ಯಗಳಲ್ಲಿ ಪಾಕಿಸ್ತಾನ ಪ್ರಜೆಗಳಿದ್ದಾರೆ ಎಂಬ ಮಾಹಿತಿ ಕಲೆ ಹಾಕಲಾಗಿದೆ. ಇವರಲ್ಲಿ ಹೆಚ್ಚಿನವರು ಶನಿವಾರ ಹಾಗೂ ಭಾನುವಾರದಂದು ಅತ್ತಾರಿಯತ್ತ ಪ್ರಯಾಣವನ್ನು ಬೆಳೆಸಲಿದ್ದಾರೆ.

ಹಿಂತಿರುಗುತ್ತಿರುವ ಪಾಕಿಸ್ತಾನ ಪ್ರಜೆಗಳನ್ನು ಅಂತಾರಾಷ್ಟ್ರೀಯ ಮಾನದಂಡ ಹಾಗೂ ಭಾರತ ಸರಕಾರದ ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ಕೋವಿಡ್ 19 ರೋಗ ಲಕ್ಷಣ ರಹಿತವಾದವರಿಗೆ ಮಾತ್ರ ಮರಳಲು ಅವಕಾಶ ನೀಡಲಾಗುವುದು.

ಲಾಕ್‌ಡೌನ್ ಜಾರಿಗೂ ಮುನ್ನ ಪಾಕಿಸ್ತಾನ ಪ್ರಜೆಗಳು ವಿವಿಧ ಅಗತ್ಯಗಳಿಗಾಗಿ ವೀಸಾ ಮುಖಾಂತರ ಭಾರತವನ್ನು ಪ್ರವೇಶಿಸಿದ್ದರು. ಆದರೆ ಕೊರೊನಾ ವೈರಸ್ ಕ್ಷಿಪ್ರ ಗತಿಯಲ್ಲಿ ಹರಡಿದ್ದರಿಂದ ದೇಶದಲ್ಲಿ ಏಕಾಏಕಿ ಲಾಕ್‌ಡೌನ್ ಘೋಷಣೆ ಮಾಡಲಾಗಿತ್ತು. ಇದರಿಂದಾಗಿ ಪಾಕಿಸ್ತಾನ ಪ್ರಜೆಗಳು ಭಾರತದಲ್ಲೇ ಸಿಕ್ಕಿ ಹಾಕಿಕೊಂಡಿದ್ದರು.

Comments are closed.