ನವದೆಹಲಿ: ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ವಿದೇಶಗಳಲ್ಲಿ ನಿರಾಶ್ರಿತರಾಗಿರುವ ಭಾರತೀಯರ ರಕ್ಷಣೆಗೆ ಕಾರ್ಯಾಚರಣೆ ಆರಂಭವಾಗಿದ್ದು, ಪ್ರಥಮ ಹಂತದ ರಕ್ಷಣಾ ಕಾರ್ಯಾಚರಣೆ ನಿಮಿತ್ತ ಭಾರತ ಸರ್ಕಾರ ಮೂರು ನೌಕಾದಳದ ನೌಕೆಗಳನ್ನು ಯುಎಇ ಮತ್ತು ಮಾಲ್ಡೀವ್ಸ್ ದೇಶಗಳಿಗೆ ರವಾನಿಸಿದೆ.
ಮುಂಬೈ ಕರಾವಳಿಯಲ್ಲಿ ಲಂಗರು ಹಾಕಿದ್ದ ಐಎನ್ಎಸ್ ಜಲಾಶ್ವ, ಐಎನ್ಎಸ್ ಮಗರ್ ನೌಕೆಗಳನ್ನು ಮಾಲ್ಡೀವ್ಸ್ ಗೆ ಕಳುಸಿಸಲಾಗಿದ್ದು, ಐಎನ್ಎಸ್ ಶಾರ್ದೂಲ್ ನೌಕೆಯನ್ನುಯುಎಇಗೆ ಕಳುಹಿಸಲಾಗಿದೆ. ಮೇ7ರ ಹೊತ್ತಿಗೆ ಈ ಮೂರು ನೌಕೆಗಳು ಮಾಲ್ಡೀವ್ಸ ಮತ್ತು ಯುಎಇ ತಲುಪುವ ಸಾಧ್ಯತೆ ಇದ್ದು, ಮೂರು ನೌಕೆಗಳು ಭಾರತೀಯರನ್ನು ಹೊತ್ತು ಕೊಚ್ಚಿ ಬಂದರಿಗೆ ಬಂದಿಳಿಯಲಿವೆ.
ಈ ಹಿಂದೆ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಬೃಹತ್ ರಕ್ಷಣಾ ಕಾರ್ಯಾಚರಣೆ ನಡೆಸುವುದಾಗಿ ಹೇಳಿತ್ತು. ಅದರಂತೆ ಮೇ 7ರಿಂದ ಹಂತ ಹಂತವಾಗಿ ಭಾರತೀಯರನ್ನು ದೇಶಕ್ಕೆ ವಾಪಸ್ ಕರೆತರುವ ಕಾರ್ಯಾಚರಣೆ ನಡೆಸಲಿದೆ. ಸೋಂಕು ವ್ಯಾಪಿಸುವ ಅಪಾಯ ಇರುವುದರಿಂದ ಯಾವ ರೀತಿಯಲ್ಲಿ ಕರೆ ತರಬೇಕೆಂದು ಕಾರ್ಯಾಚರಣೆಯ ಮಾದರಿ(SOP) ರೂಪಿಸಲಾಗಿದೆ. ವಿವಿಧ ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಭಾರತಕ್ಕೆ ಮರಳಬಯಸುವ ವ್ಯಕ್ತಿಗಳ ಪಟ್ಟಿ ತಯಾರಿಸುತ್ತಿವೆ. ವಿಮಾನ ಹತ್ತುವ ಮುನ್ನ ಪ್ರತಿಯೊಬ್ಬರ ವೈದ್ಯಕೀಯ ತಪಾಸಣೆ ನಡೆಯಲಿದೆ. ರೋಗಲಕ್ಷಣಗಳಿಲ್ಲದವರಿಗೆ ಮಾತ್ರ ಪ್ರಯಾಣದ ಅವಕಾಶ ಇರಲಿದೆ. ಆರೋಗ್ಯ ಇಲಾಖೆ ಮತ್ತು ನಾಗರಿಕ ವಿಮಾನಯಾನ ಸಚಿವಾಲಯ ರೂಪಿಸಿರುವ ಆರೋಗ್ಯ ನಿಯಮಾವಳಿಗಳನ್ನು ಪ್ರತಿಯೊಬ್ಬ ಪ್ರಯಾಣಿಕರೂ ಪಾಲನೆ ಮಾಡುವುದು ಕಡ್ಡಾಯವಾಗಿದೆ.
ವೈಮಾನಿಕ ಪ್ರಯಾಣ ಉಚಿತ
ಕೊಲ್ಲಿ ಯುದ್ಧದ ಸಂದರ್ಭದಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿದ್ದ ವಿದೇಶೀಯರೆಲ್ಲರನ್ನೂ ರಕ್ಷಿಸಲು ಅಮೆರಿಕ ಸೇರಿದಂತೆ ಹಲವು ದೇಶಗಳು ವೈಮಾನಿಕ ತೆರವು ಕಾರ್ಯಾಚರಣೆ ನಡೆದಿದ್ದವು. ಆ ಬಳಿಕ ಭಾರತ ಈಗ ನಡೆಸುತ್ತಿರುವ ತೆರವು ಕಾರ್ಯಾಚರಣೆ ಅತಿ ದೊಡ್ಡದೆನಿಸಿದೆ. ಲಕ್ಷಾಂತರ ಜನರು ಭಾರತಕ್ಕೆ ವಾಪಸ್ ಬರುವ ನಿರೀಕ್ಷೆ ಇದೆ. ಈ ಹಿಂದೆ ಚೀನಾ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ಕರೆತರಲಾಗಿದ್ದ ಭಾರತೀಯರಿಗೆ ಉಚಿತ ವಿಮಾನ ಪ್ರಯಾಣ ಸೇವೆ ನೀಡಲಾಗಿತ್ತು. ಆದರೆ ಈಗ ನಡೆಯುತ್ತಿರುವ ಕಾರ್ಯಾಚರಣೆ ಉಚಿತವಲ್ಲ. ಬದಲಿಗೆ ಪ್ರಯಾಣದ ಶುಲ್ಕವನ್ನು ಪ್ರಯಾಣಿಕರೇ ಭರಿಸಬೇಕಾಗುತ್ತದೆ.
ನೌಕೆಗಳು, ವಿಮಾನಗಳ ಸಿದ್ಧತೆ
ವಿದೇಶಗಳಲ್ಲಿ ನಿರಾಶ್ರಿತರಾಗಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಈಗಾಗಲೇ ಹಲವು ನೌಕೆಗಳನ್ನು ಮತ್ತು ವಿಮಾನಗಳನ್ನು ಸಿದ್ಧಪಡಿಸುತ್ತಿದೆ. ಈ ಹಿಂದೆ ಚೀನಾದ ವುಹಾನ್ ನಿಂದ ಭಾರತೀಯರನ್ನು ಕರೆ ತಂದಿದ್ದ ಇಂಡಿಯನ್ ಏರ್ ಲೈನ್ಸ್ ಇದಕ್ಕಾಗಿ ಸಿದ್ಧತೆ ನಡೆಸಿಕೊಂಡಿದೆ.
ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯ
ಭಾರತಕ್ಕೆ ಮರಳಿದ ಬಳಿಕ ಎಲ್ಲರೂ ಆರೋಗ್ಯ ಸೇತು ಆ್ಯಪ್ನಲ್ಲಿ ತಮ್ಮನ್ನು ನೊಂದಾಯಿಸಿಕೊಳ್ಳಬೇಕು. ಇಲ್ಲಿಯೂ ಮತ್ತೊಮ್ಮೆ ವೈದ್ಯಕೀಯ ತಪಾಸಣೆ ನಡೆಯಲಿದೆ. ಆ ನಂತರ ಅವರಿರುವ ರಾಜ್ಯದಲ್ಲಿ ಅವರನ್ನೆಲ್ಲಾ 14 ದಿನಗಳ ಕಾಲ ಕ್ವಾರಂಟೈನ್ನಲ್ಲಿಡಲಾಗುತ್ತದೆ. ಈ 14 ದಿನಗಳ ನಂತರ ಕೊರೋನಾ ಪರೀಕ್ಷೆ ನಡೆಸಿ ಆ ಬಳಿಕ ಫಲಿತಾಂಶದ ಆಧಾರದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ವಿದೇಶಗಳಿಂದ ಬರುವ ಭಾರತೀಯರ ಪರೀಕ್ಷೆ, ಕ್ವಾರಂಟೈನ್ ಇತ್ಯಾದಿ ವ್ಯವಸ್ಥೆಯನ್ನು ರಾಜ್ಯ ಸರ್ಕಾರಗಳೇ ಮಾಡಬೇಕೆಂದು ಸೂಚಿಸಲಾಗಿದೆ. ಕೇಂದ್ರ ವಿದೇಶಾಂಗ ವ್ಯವಹಾರಗಳು ಮತ್ತು ನಾಗರಿಕ ವಿಮಾನಯಾನ ಸಚಿವಾಲಯಗಳು ಸದ್ಯದಲ್ಲೇ ಎಲ್ಲಾ ವಿವರಗಳನ್ನು ತಮ್ಮ ವೆಬ್ಸೈಟ್ನಲ್ಲಿ ಪ್ರಕಟಿಸುವ ಸಾಧ್ಯತೆ ಇದೆ.
Comments are closed.