ರಾಷ್ಟ್ರೀಯ

ಲಾಕ್‌ಡೌನ್‌ ಮಧ್ಯೆಯೂ ರಾಮಮಂದಿರ ನಿರ್ಮಾಣ ಕಾರ್ಯ ಚುರುಕು

Pinterest LinkedIn Tumblr


ಅಯೋಧ್ಯೆ (ಉತ್ತರ ಪ್ರದೇಶ): ಕೊರೊನಾ ವೈರಸ್‌ ಆರ್ಭಟ ಒಂದೆಡೆಯಾದ್ರೆ, ಲಾಕ್‌ಡೌನ್‌ ಕಾಟ ಮತ್ತೊಂದೆಡೆ.. ಈ ನಡುವೆಯೂ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಾರಥ್ಯದ ಸರ್ಕಾರ ಅಯೋಧ್ಯಾ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದೆ. ಇದೀಗ ರಾಮ ಮಂದಿರ ನಿರ್ಮಾಣ ಸ್ಥಳದಲ್ಲಿ ಸ್ವಚ್ಛತಾ ಕಾರ್ಯ ಆರಂಭವಾಗಿದೆ.

ಅಯೋಧ್ಯಾ ರಾಮಮಂದಿರ ನಿರ್ಮಾಣ ಸ್ಥಳದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಸಿಆರ್‌ಪಿಎಫ್ ಕ್ಯಾಂಪನ್ನು ಸ್ಥಳಾಂತರಿಸಲಾಗಿದೆ. ರಾಮಮಂದಿರ ನಿರ್ಮಾಣದ ವೇಳೆ ಸಿಆರ್‌ಪಿಎಫ್‌ ರಕ್ಷಣೆ ಒದಗಿಸಲಿದ್ದು, ಯೋಧರಿಗಾಗಿ ಪ್ರತ್ಯೇಕ ಸ್ಥಳದಲ್ಲಿ ಕ್ಯಾಂಪ್‌ ನಿರ್ಮಿಸಲಾಗಿದೆ. ರಾಮಮಂದಿರ ನಿರ್ಮಾಣ ಸ್ಥಳದ ಸುತ್ತಲೂ ಲೋಹದ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದೆ. ಮೊದಲಿಗೆ ರಾಮಮಂದಿರ ನಿರ್ಮಾಣವಾಗಲಿರುವ ಸ್ಥಳದ ಸಮತಟ್ಟು ಕಾರ್ಯ ನೆರವೇರಲಿದೆ.

ಲಾರ್ಸನ್‌ ಹಾಗೂ ಎಎಂಪಿ ಟ್ಯೂಬ್ರೋ ಸಂಸ್ಥೆಯ ಎಂಜಿನಿಯರ್‌ಗಳ ಜೊತೆಗೆ ಅಯೋಧ್ಯೆಯ ಸ್ಥಳೀಯ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳೂ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಸ್ಥಳೀಯ ಲೋಕೋಪಯೋಗಿ ಎಂಜಿನಿಯರ್‌ಗಳ ಮೇಲುಸ್ತುವಾರಿಯಲ್ಲಿ ನಿರ್ಮಾಣ ಕಾರ್ಯ ನಡೆಯಲಿದೆ. ಎಲ್‌ ಅಂಡ್‌ ಟಿ ಕಂಪನಿ ಯಾವುದೇ ಲಾಭದ ಆಸೆ ಇಟ್ಟುಕೊಳ್ಳದೆ ಅದೇ ರೀತಿ ನಷ್ಟವನ್ನೂ ಮಾಡಿಕೊಳ್ಳದೆ ಮಂದಿರ ನಿರ್ಮಿಸಲು ಮುಂದಾಗಿದೆ.

ಹಂತ ಹಂತವಾಗಿ ರಾಮಮಂದಿರ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಶ್ರೀ ರಾಮ ತೀರ್ಥಕ್ಷೇತ್ರ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.

ತಾತ್ಕಾಲಿಕವಾಗಿ ರಾಮ್‌ ಲಲ್ಲಾ ವಿಗ್ರಹವನ್ನು ನಿರ್ಮಾಣ ಸ್ಥಳದಿಂದ ಹೊರಕ್ಕೆ ರವಾನಿಸಲಾಗಿದೆ. ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ರಾಮಲಲ್ಲಾ ವಿಗ್ರಹವನ್ನು ಮರು ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ. ಆರಂಭಿಕ ಹಂತದಲ್ಲಿ ರಾಮಮಂದಿರ ನಿರ್ಮಾಣ ಸ್ಥಳವನ್ನು ಸಮತಟ್ಟುಗೊಳಿಸಿ, ಸ್ವಚ್ಛತೆ ಕೈಗೊಳ್ಳಲಾಗಿದೆ. ಸುತ್ತಲೂ ಬ್ಯಾರಿಕೇಡ್‌ ನಿರ್ಮಿಸಲಾಗಿದೆ. ಮಣ್ಣಿನ ಪರೀಕ್ಷೆ ನಡೆಸಬೇಕಿದೆ. ಮಣ್ಣಿನ ಸತ್ವವನ್ನು ಆಧರಿಸಿ ಕಟ್ಟಡ ನಿರ್ಮಾಣ ಕಾರ್ಯ ಮುಂದುವರೆಯಲಿದೆ. ಈ ಸಂಬಂಧ ಟ್ರಸ್ಟ್‌ನ ಸದಸ್ಯರು ವಿಡಿಯೋ ಕಾಲ್‌ ಮೂಲಕ ನಿರಂತರವಾಗಿ ನಿರ್ಮಾಣ ಕಾರ್ಯದ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ.

Comments are closed.