ರಾಷ್ಟ್ರೀಯ

ಪಡಿತರ ಚೀಟಿ ಕುರಿತಾದ ನಿಯಮದಲ್ಲಿ ಬದಲಾವಣೆ

Pinterest LinkedIn Tumblr


ಈ ವೇಳೆ ನೀವೂ ಕೂಡ ಸಹ ಪಡಿತರ ಚೀಟಿ ಹೊಂದಿರುವವರಾಗಿದ್ದರೆ, ಈ ಸುದ್ದಿ ನಿಮಗೆ ಭಾರಿ ನೆಮ್ಮದಿ ನೀಡಲಿದೆ. ಏಕೆಂದರೆ, ಕೇಂದ್ರ ಸರ್ಕಾರ ಪಡಿತರ ಚೀಟಿಗಳಿಗೆ ಸಂಬಂಧಿಸಿದ ಒಂದು ನಿಯಮವನ್ನು ಬದಲಾಯಿಸಿದೆ. ಸರ್ಕಾರದ ನಿರ್ಧಾರದಿಂದ ಕೋಟ್ಯಂತರ ಫಲಾನುಭವಿಗಳು ಲಾಭ ಪಡೆಯುವ ನಿರೀಕ್ಷೆಯಿದೆ.

ಹೌದು, ಪಡಿತರ ಚೀಟಿಗಳನ್ನು ಆಧಾರ್‌ಗೆ ಜೋಡಿಸುವ ಗಡುವನ್ನು ಕೇಂದ್ರ ಆಹಾರ ಸಚಿವಾಲಯ ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಿದೆ. ಆಧಾರ್‌ಗೆ ಜೋಡಣೆಯಾಗದ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗುವುದು ಎಂಬ ವರದಿಗಳು ಹಿನ್ನೆಲೆ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಆಧಾರ್‌ಗೆ ಸಂಪರ್ಕ ಹೊಂದಿಲ್ಲದ ಲಕ್ಷಾಂತರ ಪಡಿತರ ಚೀಟಿ ಧಾರಕರು ಇನ್ನೂ ಇರುವುದು ಇಲ್ಲಿ ಉಲ್ಲೇಖನೀಯ.

ಈ ಕುರಿತು ಫೆಬ್ರುವರಿ 7,2017 ರಂದು ಅಧಿಸೂಚನೆ ಹೊರಡಿಸಿದ್ದ ಕೇಂದ್ರ ಸರ್ಕಾರ, ಎಲ್ಲಾ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇರುವ ಪಡಿತರ ಚೀಟಿಗಳನ್ನು ಆಧಾರ್ ಸಂಖ್ಯೆಗೆ ಜೋಡಿಸುವ ಜವಾಬ್ದಾರಿಯನ್ನು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಗೆ ನೀಡಲಾಗಿದೆ ಎಂದು ಹೇಳಿತ್ತು.

ಕಾಲ-ಕಾಲಕ್ಕೆ ತಕ್ಕಂತೆ ಈ ಅಧಿಸೂಚನೆಯಲ್ಲಿ ತಿದ್ದುಪಡಿ ಮಾಡಲಾಗಿದ್ದು, ಇದೀಗ ಆಧಾರ್ ಹಾಗೂ ಪಡಿತರ ಚೀಟಿ ಜೋಡಣೆಯ ಅಂತಿಮ ತಿಥಿಯನ್ನು ಸೆಪ್ಟೆಂಬರ್ 30,2020ರವರೆಗೆ ವಿಸ್ತರಿಸಲಾಗಿದೆ. ಅಂದರೆ ಇನ್ಮುಂದೆ ನೀವು ಈ ಕೆಲಸವನ್ನು ಸೆಪ್ಟೆಂಬರ್ 30 ರವರೆಗೆ ಮಾಡಬಹುದಾಗಿದೆ.

ಈ ಕುರಿತು ಜಾರಿಗೊಳಿಸಲಾಗಿರುವ ಹೇಳಿಕೆಯಲ್ಲಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಸರ್ಕಾರಗಳು ಫಲಾನುಭವಿಗಳಿಗೆ ಸೆಪ್ಟೆಂಬರ್ 30ರವರೆಗೆ ಪಡಿತರವನ್ನು ನಿರಾಕರಿಸುವಂತಿಲ್ಲ ಎಂದೂ ಕೂಡ ಸ್ಪಷ್ಟಪಡಿಸಲಾಗಿದೆ. ಅಂದರೆ, ಆಧಾರ್ ಕಾರ್ಡ್ ಗೆ ಲಿಂಕ್ ಆಗದ ಯಾರೊಬ್ಬರ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಸದ್ಯ ದೇಶಾದ್ಯಂತ ಕೊರೊನಾ ವೈರಸ್ ಕಾರಣ ಉದ್ಭವಿಸಿರುವ ಬಿಕ್ಕಟ್ಟಿನ ಹಿನ್ನೆಲೆ ಲಾಕ್ ಡೌನ್ ಘೋಷಿಸಲಾಗಿದೆ. ಮಾರ್ಚ್ 17ರಂದು ಜಾರಿಗೆ ಬಂದ ಈ ಲಾಕ್ ಡೌನ್ ನ ಮೂರನೇ ಹಂತ ಮೇ 17ಕ್ಕೆ ಕೊನೆಗೊಳ್ಳಲಿದೆ. ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ದೇಶದ ನಾಗರಿಕರಿಗೆ ಆಹಾರದ ಸಮಸ್ಯೆ ಎದುರಾಗಬಾರದು ಎಂಬ ಕಾರಣಕ್ಕೆ, ಕೇಂದ್ರ ಸರ್ಕಾರವು ಪ್ರತಿ ತಿಂಗಳು 15 ಕೆ.ಜಿ ಪಡಿತರದಂತೆ ಒಟ್ಟು ಮೂರು ತಿಂಗಳುಗಳ ಕಾಲ ಉಚಿತ ಪಡಿತರ ವಿತರಿಸುವುದಾಗಿ ಘೋಷಣೆ ಮಾಡಿದೆ.

ಈ ನೆರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿ ಪ್ರತಿ ವ್ಯಕ್ತಿಗೆ ತಿಂಗಳಿಗೆ ಐದು ಕೆಜಿ ಅಗ್ಗದ ಪಡಿತರ ಕೋಟಾಗಿಂತ ಹೆಚ್ಚುವರಿಯಾಗಿರುತ್ತದೆ. ಕೇಂದ್ರ ಸರ್ಕಾರದ ಪ್ರಕಾರ, ದೇಶದಲ್ಲಿ 80 ಕೋಟಿಗೂ ಹೆಚ್ಚು ಫಲಾನುಭವಿಗಳು ಇದರ ವ್ಯಾಪ್ತಿಗೆ ಬರುತ್ತಾರೆ.

Comments are closed.