ನವದೆಹಲಿ(ಮೇ.14): ಇಡೀ ವಿಶ್ವವೇ ತತ್ತರಿಸಿ ಹೋಗಿರುವಾಗಲೇ ಮಾರಕ ಕೋವಿಡ್-19 ಸೋಂಕಿನ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ(WHO) ಬೆಚ್ಚಿಬೀಳಿಸುವಂತಹ ಮಾಹಿತಿ ನೀಡಿದೆ. ಯಾವಾಗ ನಾವು ಈ ಸೋಂಕಿನಿಂದ ಮುಕ್ತವಾಗುತ್ತೇವೆ ಎಂದು ಹಲವು ರಾಷ್ಟ್ರಗಳು ಎದುರು ನೋಡುತ್ತಿರುವ ಹೊತ್ತಲೇ ವಿಶ್ವ ಆರೋಗ್ಯ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಮೈಕೆಲ್ ಜೆ ರಯಾನ್ ಕೊರೋನಾ ಬಹುಶಃ ಎಂದಿಗೂ ಹೋಗಲಾರದು ಎನ್ನುವ ಮೂಲಕ ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದ್ಧಾರೆ. ಬದಲಿಗೆ ಇದು ಎಚ್‌ಐವಿ (HIV) ಸೋಂಕಿನಂತೆಯೇ ಮತ್ತೊಂದು ವೈರಸ್ ಆಗಬಹುದು ತಿಳಿಸಿದ್ದಾರೆ.
ಶತಮಾನಗಳಿಂದಲೂ ಮನು ಕುಲವನ್ನು ಅನೇಕ ಸಾಂಕ್ರಾಮಿಕ ರೋಗ- ರುಜಿನಗಳು ಕಾಡುತ್ತಿವೆ. ನಾವು ಇನ್ನೂ ಎಚ್ಐವಿಯನ್ನೇ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ಅದೇ ಮಾದರಿಯಲ್ಲಿ ಕೊರೋನಾ ವೈರಸ್ ಕೂಡ ಆಗಬಹುದು. ಇದು ಕೂಡ ಎಚ್‌ಐವಿ ಹಾಗೆಯೇ ನಮ್ಮ ಸಮುದಾಯಗಳಲ್ಲಿ ಮತ್ತೊಂದು ವೈರಸ್ ಆಗಬಹುದು. ಜತೆಗೆ ಈ ವೈರಸ್ ಧೀರ್ಘಕಾಲ ಇರಬಹುದು ಎಂದು ರಯಾನ್ ಹೇಳಿದ್ಧಾರೆ.
ಹೀಗೆಯೇ ಮುಂದುವರಿದ ಅವರು, ನಾನು ಎರಡೂ ವೈರಸ್ಗಳನ್ನು ಹೋಲಿಕೆ ಮಾಡುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಾವು ಆದಷ್ಟು ವಾಸ್ತವ ಅರಿಯುವುದನ್ನು ಪ್ರಯತ್ನಿಸಬೇಕು. ನಾವು ಕೋವಿಡ್-19 ಯಾವಾಗ ಕಣ್ಮರೆಯಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ ಎಂದರು.
ಇದೇ ವೇಳೆ ಜಗತ್ತಿನಾದ್ಯಂತ ಲಾಕ್ಡೌನ್ ಸಡಿಲಗೊಳಿಸುವ ಬಗ್ಗೆ ಮಾತಾಡಿದ ರಯಾನ್, ಪ್ರತಿನಿತ್ಯ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಹೆಚ್ಚಾಗುತ್ತಿವೆ. ಹೀಗಿರುವಾಗ ಕೊರೋನಾ ಲಾಕ್ಡೌನ್ ಸಡಿಲಗೊಳಿಸುವುದು ಮತ್ತಷ್ಟು ಅಪಾಯಕಾರಿ. ನಾವು ಸಾಂಕ್ರಾಮಿಕ ವೈರಸ್ ಹರಡುವಿಕೆ ತಡೆಯಲು ಲಾಕ್ಡೌನ್ ಬಿಗಿಗೊಳಿಸಲೇಬೇಕು ಎಂದು ಒತ್ತಾಯಿಸಿದರು.
ಇನ್ನು, ಕೊರೋನಾ ವೈರಸ್ ಇದವರೆಗೂ ಜಗತ್ತಿನಾದ್ಯಂತ 44 ಲಕ್ಷ ಜನರಿಗೆ ಮಂದಿಗೆ ಬಂದಿದೆ. ನಿನ್ನೆ ಸಂಜೆ ಹೊತ್ತಿಗೆ 2.95 ಲಕ್ಷಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ.
Comments are closed.