ನವದೆಹಲಿ(ಮೇ 15): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 20 ಲಕ್ಷ ಕೋಟಿ ಪ್ಯಾಕೇಜ್ನ ಮೂರನೇ ಹಂತರದ ಘೋಷಣೆಗಳನ್ನು ಮಾಡಿದ್ದಾರೆ. ಇದರಲ್ಲಿ ಕೃಷಿ ಹಾಗೂ ಸಂಬಂಧಿತ ವಲಯಗಳಿಗೆ ವಿವಿಧ ಯೋಜನೆ ಮತ್ತು ಅನುದಾನ ಹಾಗೂ ಗುರಿಗಳನ್ನ ಪ್ರಕಟಿಸಿದ್ದಾರೆ. ಇದರಲ್ಲಿ ಪ್ರಮುಖವಾದುದು ಕೃಷಿ ಮಾರುಕಟ್ಟೆ ಮೂಲಸೌಕರ್ಯಕ್ಕಾಗಿ 1 ಲಕ್ಷ ಕೋಟಿ ರೂಪಾಯಿ ನೀಡಿರುವುದು. ಇದರ ಜೊತೆಗೆ ಇನ್ನೂ ಹಲವು ಉತ್ತೇಜನಗಳನ್ನು ಸಚಿವರು ನೀಡಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಕೃಷಿ ವಲಯಕ್ಕೆ ಮಾಡಿದ ಘೋಷಣೆಗಳ ಮುಖ್ಯಾಂಶಗಳು:
* ಕೃಷಿ ಮೂಲಸೌಕರ್ಯ ಯೋಜನೆಗಳ ಜಾರಿಗೆ 1 ಲಕ್ಷ ಕೋಟಿ ರೂ. ಇದರಿಂದ ರೈತರ ಬೆಳೆಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆಯಾಗುವ ಆಶಯ ಇದೆ.
* ಸಣ್ಣ ಆಹಾರ ಉದ್ಯಮಗಳಿಗೆ ಪುಷ್ಟಿ ನೀಡಲು 10,000 ಕೋಟಿ ರೂ ಯೋಜನೆ – ದೇಶದಲ್ಲಿರುವ 2 ಲಕ್ಷ ಅಸಂಘಟಿತ ಸಣ್ಣ ಆಹಾರ ಉದ್ಯಮಗಳನ್ನು ಸಂಘಟಿತಗೊಳಿಸಲು ಸಾಧ್ಯವಾಗುತ್ತದೆ. ಗುಣಮಟ್ಟ ಹೆಚ್ಚಿಸಿ ರಫ್ತು ಮಾಡಲು ಅನುವು ಮಾಡಿಕೊಡುತ್ತದೆ.
* ಮೀನುಗಾರರಿಗೆ 20,000 ಕೋಟಿ ರೂ. – ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ –ಮೀನುಗಾರಿಕೆ ಬಂದರು, ಶೀತಲೀಕರಣ ವ್ಯವಸ್ಥೆ, ಮೀನು ಮಾರುಕಟ್ಟೆ, ಮೀನುಗಾರಿಕೆ ಚಟುವಟಿಕೆ ಇತ್ಯಾದಿಗಳಿಗೆ ಈ ಯೋಜನೆಯ ಹಣ ಬಳಕೆಯಾಗುತ್ತದೆ.
* ಪಶು ರೋಗ ನಿಯಂತ್ರ ಯೋಜನೆಗೆ 13,343 ಕೋಟಿ ರೂ. – ಕಾಲುಬಾಯಿ ಮೊದಲಾದ ರೋಗದ ಬಾಧೆ ಹೆಚ್ಚಾಗುತ್ತಿದೆ. ದೇಶದ ಪ್ರತಿಯೊಂದು ಹಸು, ಎಮ್ಮೆ, ಮೇಕೆ, ಕುರಿ ಮೊದಲಾದ ಪಶುಗಳಿಗೆ ಲಸಿಕೆ ನೀಡುವುದು ಗುರಿ.* ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿಗೆ 15,000 ಕೋಟಿ ರೂ. – ಡೈರಿ ಸಂಸ್ಕರಣ ಘಟಕಗಳಿಗೆ ಖಾಸಗಿ ಹೂಡಿಕೆಗೆ ಬೆಂಬಲ ನೀಡುವುದು ಇತ್ಯಾದಿ ಯೋಜನೆಗಳಿವೆ.
* ಔಷಧೀಯ ಸಸ್ಯಗಳ ಅಭಿವೃದ್ಧಿಗೆ 4,000 ಕೋಟಿ ರೂ.: 1 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಔಷಧೀಯ ಸಸ್ಯಗಳನ್ನ ಬೆಳೆಯುವುದು ಗುರಿ. ಇಂಥ ಸದಸ್ಯಗಳಿಗೆ ಪ್ರಾದೇಶಿಕ ಮಾರುಕಟ್ಟೆಗಳ ನೆಟ್ವರ್ಕ್ ರೂಪಿಸುವುದು.
* ಜೇನು ಸಾಕಾಣಿಕೆಗೆ 500 ಕೋಟಿ ರೂ.: ಕೃಷಿಗಾರಿಕೆಯಲ್ಲಿ ಜೇನು ಹುಳುಗಳ ಪಾತ್ರ ಬಹಳ ಮಹತ್ವದ್ದು. ಪರಾಗಸ್ಪರ್ಶ ಕ್ರಿಯೆ ಮೂಲಕ ಜೇನುಹುಳಗಳು ಕೃಷಿಕರಿಗೆ ಸಹಾಯ ಮಾಡುತ್ತವೆ. ಈ ನಿಟ್ಟಿನಲ್ಲಿ ಜೇನು ಸಾಕಾಣಿಕೆಯ ಅಭಿವೃದ್ಧಿಗೆ 500 ಕೋಟಿ ರೂ ಇಡಲಾಗಿದೆ.
* ಆಪರೇಷನ್ ಗ್ರೀನ್ಗೆ 500 ಕೋಟಿ ರೂ: ಟೊಮೆಟೋ, ಈರುಳ್ಳಿ ಮತ್ತು ಆಲೂಗಡ್ಡೆಗೆ ಮಾತ್ರ ಇದ್ದ ಆಪರೇಷನ್ ಗ್ರೀನ್ ಯೋಜನೆ ಈಗ ಎಲ್ಲಾ ಬೆಳೆಗಳಿಗೆ ವಿಸ್ತರಣೆ. ಈ ಯೋಜನೆಯಡಿ ರೈತರು ತಮ್ಮ ಹೆಚ್ಚುವರಿ ಬೆಳೆಗಳನ್ನ ತಮ್ಮಿಚ್ಛೆಯ ಮಾರುಕಟ್ಟೆಗೆ ಸಾಗಿಸಲು ತಗುಲುವ ಸಾಗಣೆ ವೆಚ್ಚದಲ್ಲಿ ಶೇ. 50 ಸಬ್ಸಿಡಿ ಪಡೆಯಬಹುದು. ಹಾಗೆಯೇ, ಬೆಳೆಗಳನ್ನು ದೀರ್ಘಕಾಲ ಕಾಪಾಡಲು ಕೋಲ್ಡ್ ಸ್ಟೋರೇಜ್ಗಳಲ್ಲಿ ಸಂಗ್ರಹಿಸಲು ಶೇ. 50 ಸಬ್ಸಿಡಿ ನೀಡಲಾಗುತ್ತದೆ.
* ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗಲು ಅನುವಾಗುವಂತೆ “ಅಗತ್ಯ ವಸ್ತುಗಳ ಕಾಯ್ದೆ”ಗೆ ತಿದ್ದುಪಡಿ ತರುವ ಉದ್ದೇಶವಿದೆ.
* ರೈತರು ತಮ್ಮ ಉತ್ಪನ್ನವನ್ನು ಬೇರೆ ರಾಜ್ಯಗಳ ಮಾರುಕಟ್ಟೆಗೆ ಮಾರುವಂತೆ ಕಾನೂನು ಬದಲಾವಣೆ; ಇ ಮಾರುಕಟ್ಟೆಗೂ ಅವಕಾಶ ಇರುವಂತೆ ಸುಧಾರಣೆಗಳನ್ನು ತರಲಾಗುವುದು.
Comments are closed.