ಹೊಸದಿಲ್ಲಿ: ಕೊರೊನಾ ಪ್ರಸರಣ ತಡೆಗೆ ಕೇಂದ್ರ ಸರಕಾರ ಲಾಕ್‌ಡೌನ್ ಘೋಷಿಸಿದ್ದರಿಂದ ದೇಶದ ವಿವಿಧ ರಾಜ್ಯಗಳಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರನ್ನು ಅವರ ತವರಿಗೆ ತಲುಪಿಸಲು ಭಾರತೀಯ ರೈಲ್ವೆ ಇಲಾಖೆ ಆರಂಭಿಸಿದ ‘ಶ್ರಮಿಕ್’ ವಿಶೇಷ ರೈಲುಗಳ ಉದ್ದೇಶ ಈಡೇರಿದೆ. ಮೇ 1 ರಿಂದ ಸಂಚಾರ ಆರಂಭಿಸಿದ ಶ್ರಮಿಕ್ ರೈಲುಗಳು ಮೇ 15ರ ಮಧ್ಯರಾತ್ರಿವರೆಗೆ 14 ಲಕ್ಷ ಕಾರ್ಮಿಕರನ್ನು ಅವರ ತವರಿಗೆ ತಲುಪಿಸಿವೆ. ಅದರಲ್ಲೂ ಕಳೆದ ಮೂರು ದಿನಗಳಿಂದ ಪ್ರತಿನಿತ್ಯ 2 ಲಕ್ಷಕ್ಕೂ ಅಧಿಕ ಕಾರ್ಮಿಕರು ಶ್ರಮಿಕ್ ರೈಲುಗಳಲ್ಲಿ ಸಂಚರಿಸಿದ್ದಾರೆ.
ಮೇ 1ರಂದು ನಾಲ್ಕು ಶ್ರಮಿಕ್ ರೈಲುಗಳು 5,000 ಪ್ರಯಾಣಿಕರೊಂದಿಗೆ ಸಂಚಾರ ಆರಂಭಿಸಿದ್ದವು. ಮೇ 15ರವರೆಗೆ ಒಟ್ಟು 1,074 ಶ್ರಮಿಕ್ ರೈಲುಗಳು ಸಂಚರಿಸಿವೆ. ಇದು ರೈಲ್ವೆ ಇಲಾಖೆಯ ಮಹತ್ವದ ಸಾಧನೆಗಳಲ್ಲಿ ಒಂದಾಗಿದೆ. ನಿತ್ಯ 300 ವಿಶೇಷ ರೈಲುಗಳ ಮೂಲಕ ಪ್ರತಿದಿನ 4 ಲಕ್ಷ ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ರೈಲ್ವೆ ಇಲಾಖೆಗೆ ಇದೆ. ಸದ್ಯ ಪ್ರತಿದಿನವೂ 145 ಶ್ರಮಿಕ ವಿಶೇಷ ರೈಲುಗಳು ಸಂಚರಿಸುತ್ತವೆ.
ಎಂದು ಭಾರತೀಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಶ್ರಮಿಕ್ ರೈಲುಗಳಲ್ಲಿ ಕಾರ್ಮಿಕರನ್ನು ಕೂರಿಸುವಾಗ ಸಾಮಾಜಿಕ ಅಂತರವನ್ನು ತಪ್ಪದೇ ಪಾಲಿಸಲಾಗಿದೆ. ಬೋಗಿ ಸಾಮರ್ಥ್ಯದ ಶೇ.75 ಆಸನಗಳನ್ನು ಮಾತ್ರ ಬಳಸಿಕೊಂಡು ಪ್ರಯಾಣಿಕರನ್ನು ದೂರದಲ್ಲಿ ಕೂರಿಸಲಾಗಿದೆ. ಅಲ್ಲದೆ ಅವರಿಗೆ ಪ್ರಯಾಣದ ವೇಳೆ ಉಚಿತ ಊಟ ಮತ್ತು ನೀರನ್ನು ಕೂಡ ಇಲಾಖೆ ಒದಗಿಸಿದೆ.
ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಒಡಿಶಾ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ತ್ರಿಪುರಾ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಉತ್ತರಾಖಂಡಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಪ್ರಯಾಣಿಸಿದ್ದಾರೆ.
Comments are closed.