ನವದೆಹಲಿ: ಕೇಂದ್ರ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ನಿಂದ ನಯಾ ಪೈಸೆ ಪ್ರಯೋಜನವಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಲಾಕ್‌ಡೌನ್‌ನ ಗುರಿ ಮತ್ತು ಉದ್ದೇಶ ಸಂಪೂರ್ಣವಾಗಿ ವಿಫಲವಾಗಿದೆ. ದೇಶದಲ್ಲಿ 21 ದಿನಗಳ ಲಾಕ್‌ಡೌನ್ (Lockdown) ಜಾರಿಗೆ ತರಲಾಗುತ್ತಿದೆ ಎಂದು ಮಾತನಾಡಿದ್ದ ಪ್ರಧಾನಿಗಳು ಇಂದು ಲಾಕ್‌ಡೌನ್ 60 ದಿನಗಳನ್ನು ಪೂರೈಸಿದ್ದರೂ ಮುನ್ನಲೆಯಲ್ಲಿ ಕಾಣಿಸುತ್ತಿಲ್ಲ. ಲಾಕ್‌ಡೌನ್ ವಿಫಲವಾಗುತ್ತಿದ್ದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಿನ್ನೆಲೆಗೆ ಸರಿದಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ಕರೋನವೈರಸ್ (Coronavirus) ಲಾಕ್‌ಡೌನ್ ಕುರಿತಂತೆ ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿಫಲವಾಗಿದೆ ಎಂದು ಬಣ್ಣಿಸಿದರಲ್ಲದೆ ಲಾಕ್‌ಡೌನ್ ಮಾಡಿಯೂ ಕರೋನಾ ಸೋಂಕು ಹೆಚ್ಚಾಗುತ್ತಿರುವ ಏಕೈಕ ದೇಶ ಭಾರತ ಎಂದು ವಿಷಾದ ವ್ಯಕ್ತಪಡಿಸಿದರು.
ಲಾಕ್‌ಡೌನ್‌ನ ಗುರಿ ಮತ್ತು ಉದ್ದೇಶ ಸಂಪೂರ್ಣವಾಗಿ ವಿಫಲವಾಗಿದೆ. ಆದರೆ ಇದರ ಪರಿಣಾಮವನ್ನು ದೇಶದ ಜನತೆ ಅನುಭವಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ ರಾಹುಲ್ ಲಾಕ್‌ಡೌನ್ ತೆರೆಯುವ ತಂತ್ರದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಪ್ರಶ್ನಿಸಿದರು.
ಮೇ ತಿಂಗಳಲ್ಲಿ ಕರೋನಾವೈರಸ್ ಕೋವಿಡ್ -19 (Covid-19) ಕಡಿಮೆಯಾಗಲಿದೆ ಎಂದು ಪ್ರಧಾನಿ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳು ಅಭಿಪ್ರಾಯಪಟ್ಟಿರುತ್ತಾರೆ. ಆದರೆ ಪ್ರಕರಣಗಳು ಕಡಿಮೆಯಾಗುವ ಬದಲಿಗೆ ಹೆಚ್ಚಾಗುತ್ತಿವೆ. ರೋಗವನ್ನು ನಿಯಂತ್ರಿಸಲು ಸರ್ಕಾರ ಏನೆಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ. ಯಾವ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಮತ್ತು ವಲಸಿಗರು, ರಾಜ್ಯ ಸರ್ಕಾರಗಳು, ಎಂಎಸ್‌ಎಂಇಗಳನ್ನು ಬೆಂಬಲಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂಬ ಬಗ್ಗೆ ವಿವರಿಸಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದರು.
ಹಣವನ್ನು ನೇರವಾಗಿ ರೈತರು ಮತ್ತು ಕಾರ್ಮಿಕರ ಕೈಗೆ ವರ್ಗಾಯಿಸುತ್ತಿರುವ ರಾಜ್ಯ ಸರ್ಕಾರಗಳನ್ನು ಕೇಂದ್ರ ಸರ್ಕಾರ ಬೆಂಬಲಿಸುತ್ತಿಲ್ಲ ಎಂದು ಆರೋಪಿಸಿದ ರಾಹುಲ್ ಗಾಂಧಿ ಅವರು, ಎರಡು ತಿಂಗಳ ಹಿಂದೆ ನಾವು ಕರೋನಾವೈರಸ್ ವಿರುದ್ಧ ಹೋರಾಡಬೇಕಿದೆ. ಅದಕ್ಕಾಗಿ ದೇಶದಲ್ಲಿ 21 ದಿನಗಳ ಲಾಕ್‌ಡೌನ್ ಜಾರಿಗೆ ತರಲಾಗುತ್ತಿದೆ ಎಂದು ಮಾತನಾಡಿದ್ದ ಪ್ರಧಾನಿ ಇಂದು ಲಾಕ್‌ಡೌನ್ 60 ದಿನಗಳನ್ನು ಪೂರೈಸಿದ್ದರೂ ಮುನ್ನೇಲೆಯಲ್ಲಿ ಕಾಣಿಸುತ್ತಿಲ್ಲ. ವಿಪಕ್ಷವಾಗಿ ನಾನು ನರೇಂದ್ರ ಮೋದಿ (Narendra Modi)ಯನ್ನು ಮುನ್ನಲೆಗೆ ಬಂದು ಮಾತನಾಡುವಂತೆ ಮನವಿ ಮಾಡುತ್ತೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನತೆಯ ಮುಂದೆ ಬಂದು ಮಾತನಾಡಬೇಕು. ವಿಫಲ ಲಾಕ್‌ಡೌನ್ ಫಲಿತಾಂಶ ಎಲ್ಲರ ಮುಂದೆ ಇದೆ. ಈಗ ಸರ್ಕಾರದ ದೃಷ್ಟಿಕೋನ ಏನೆಂದು ಜನರಿಗೆ ತಿಳಿಯಬೇಕು. ಲಾಕ್‌ಡೌನ್ ತೆಗೆಯಲು ಸರ್ಕಾರದ ಮುಂದಿನ ತಂತ್ರವೇನು ಎಂಬುದು ಎಲ್ಲರಿಗೂ ಸ್ಪಷ್ಟವಾಗಬೇಕು. ಬಡವರು ತಮ್ಮ ಬದುಕು ಕಟ್ಟಿಕೊಳ್ಳಲು ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಮೋದಿ ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರದ ಪ್ಯಾಕೇಜ್ ನಿಂದ ಏನು ಲಾಭ ಇಲ್ಲ:
ಕೇಂದ್ರ ಸರ್ಕಾರದ ಆರ್ಥಿಕ ಪ್ಯಾಕೇಜ್ ನಿಂದ ಏನೂ ಪ್ರಯೋಜನವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ರಾಹುಲ್ ಗಾಂಧಿ ಅವರು, ಆರ್ಥಿಕ ಪ್ಯಾಕೇಜ್ ಜಿಡಿಪಿಯ ಶೇಕಡಾ 10 ರಷ್ಟಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ ಇದು ಜಿಡಿಪಿಯ ಒಂದು ಶೇಕಡಾ (1%) ಮತ್ತು ವಾಸ್ತವಿಕವಾಗಿ ಜನರಿಗೆ ಯಾವುದೇ ಹಣವನ್ನು ನೀಡಲಾಗುವುದಿಲ್ಲ. ಬಡ ಜನರಿಗೆ ನಗದು ಹಣ ವರ್ಗಾವಣೆ ಮಾಡದೆ ಏನೂ ಪ್ರಯೋಜನವಿಲ್ಲ. ಸರ್ಕಾರ ತಕ್ಷಣವೇ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಆರ್ಥಿಕತೆಯನ್ನು ಬಲಿಷ್ಠಗೊಳಿಸಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೇಶ ದೊಡ್ಡ ಆರ್ಥಿಕ ಮುಗ್ಗಟ್ಟನ್ನು ಎದುರಿಸಲಿದೆ ಎಂದು ಎಚ್ಚರಿಕೆ ನೀಡಿದರು.
Comments are closed.