ರಾಷ್ಟ್ರೀಯ

ಆರೋಗ್ಯ ಸೇತು ಆಪ್ ನಲ್ಲಿ ನ್ಯೂನತೆ ಕಂಡುಹಿಡಿದವರಿಗೆ ಸರ್ಕಾರದಿಂದ ಪ್ರಶಸ್ತಿ

Pinterest LinkedIn Tumblr

ನವದೆಹಲಿ: ಕೊರೋನಾ ವೈರಸ್ ನ್ನು ಪತ್ತೆಹಚ್ಚುವ ಆರೋಗ್ಯ ಸೇತು ಆಪ್ ನ ಮೂಲ ಕೋಡ್ ನ್ನು ತೆರೆಯುವುದಾಗಿ ಘೋಷಣೆ ಮಾಡಿರುವ ಕೇಂದ್ರ ಸರ್ಕಾರ ಅದರ ಸುರಕ್ಷತೆಗೆ ಹಲವು ಕ್ರಮಗಳನ್ನು ಅನುಸರಿಸಲು ಮುಂದಾಗಿದೆ.

ಅದರ ಭಾಗವಾಗಿ ಗೌಪ್ಯತೆ ಸಮಸ್ಯೆಗಳನ್ನು ಪರಿಹರಿಸಲು ಪರಿಶೀಲನೆಗಾಗಿ ಮತ್ತು ಭದ್ರತಾ ನ್ಯೂನತೆಗಳನ್ನು ಕಂಡುಹಿಡಿಯಲು ಬಗ್ ಬೌಂಟಿ ಕಾರ್ಯಕ್ರಮವನ್ನು ಪ್ರಾರಂಭಿಸಲು ಸರ್ಕಾರ ತನ್ನ ಕೊರೊನಾವೈರಸ್ ಟ್ರ್ಯಾಕಿಂಗ್ ಅಪ್ಲಿಕೇಶನ್‌ನ ಆರೋಗ್ಯ ಸೇತು ಮೂಲ ಕೋಡ್ ತೆರೆಯುವುದಾಗಿ ಪ್ರಕಟಿಸಿದೆ.

ಈ ಮಟ್ಟದಲ್ಲಿ ಮೂಲ ಕೋಡ್ ನ್ನು ಜಗತ್ತಿನ ಬೇರಾವುದೇ ದೇಶಗಳು ತೆರೆದಿಲ್ಲ ಎಂದು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಹೇಳಿದ್ದಾರೆ. ಕೊರೋನಾ ಸಂಪರ್ಕ ಪತ್ತೆಹಚ್ಚುವ ಆಪ್ ಸಂಗ್ರಹಿಸಿದ ಅಂಕಿಅಂಶ ರಹಸ್ಯ ಕಾಪಾಡುವಿಕೆಗೆ ಕೇಂದ್ರ ಸರ್ಕಾರ ಮೂಲ ಕೋಡ್ ನ್ನು ತೆರೆದಿದೆ.

ನಿಖರತೆ, ಪಾರದರ್ಶಕತೆ, ಖಾಸಗಿತನದ ರಹಸ್ಯ ಕಾಪಾಡುವಿಕೆ ಮತ್ತು ಸುರಕ್ಷತೆ ಆರೋಗ್ಯ ಸೇತು ಆಪ್ ನ ವಿನ್ಯಾಸ ತತ್ವಗಳಾಗಿವೆ. ಇದೀಗ ಮೂಲ ಕೋಡ್ ನ್ನು ತೆರೆಯುವುದು ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ. ಈ ಮಟ್ಟದಲ್ಲಿ ಜಗತ್ತಿನ ಯಾವ ದೇಶಗಳು ಕೂಡ ಮೂಲ ಕೋಡನ್ನು ತೆರೆದಿಲ್ಲ ಎಂದಿದ್ದಾರೆ.

ನ್ಯೂನತೆ ಕಂಡುಹಿಡಿದವರಿಗೆ ಪ್ರಶಸ್ತಿ: ಆರೋಗ್ಯ ಸೇತು ಆಪ್ ನಲ್ಲಿ ನ್ಯೂನತೆ ಕಂಡುಹಿಡಿದವರಿಗೆ ಮತ್ತು ಆಪ್ ನ ಅಭಿವೃದ್ಧಿಗೆ ಸಲಹೆ ನೀಡಿದವರಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ಅವುಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಆಪ್ ನಲ್ಲಿರುವ ಸುರಕ್ಷತೆ ದುರ್ಬಲತೆ ಕಂಡುಹಿಡಿದವರಿಗೆ ಮೂರು ಭಾಗಗಳಲ್ಲಿ ತಲಾ 1 ಲಕ್ಷ ರೂಪಾಯಿಗಳಂತೆ ಪ್ರಶಸ್ತಿ ನೀಡಲಾಗುತ್ತದೆ. ಕೋಡ್ ಅಭಿವೃದ್ಧಿಪಡಿಸುವುದಕ್ಕೆ 1 ಲಕ್ಷ ರೂಪಾಯಿ ಪ್ರಶಸ್ತಿಯಿದೆ ಎಂದು ರಾಷ್ಟ್ರೀಯ ಮಾಹಿತಿ ಕೇಂದ್ರದ ಮಹಾ ನಿರ್ದೇಶಕ ನೀತಾ ವರ್ಮಾ ತಿಳಿಸಿದ್ದಾರೆ.

ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದಂತೆ ಅದು ಎಲ್ಲೆಲ್ಲ ಹರಡಿದೆ, ಎಲ್ಲಿ ಸೋಂಕಿತರಿದ್ದಾರೆ ಎಂದು ಮಾಹಿತಿ ನೀಡುವ ಆರೋಗ್ಯ ಸೇತು ಆಪ್ ನ್ನು ಏಪ್ರಿಲ್ 2ರಂದು ಆರಂಭಿಸಲಾಗಿತ್ತು, ಪ್ರಸ್ತುತ 11.5 ಕೋಟಿ ಬಳಕೆದಾರರಿದ್ದಾರೆ. ಆರೋಗ್ಯ ಸೇತು ಆಪ್ ನ ಮೂಲ ಕೋಡ್ ಗಿಥಬ್ ನಲ್ಲಿ ಮಧ್ಯರಾತ್ರಿ 12 ಗಂಟೆ ನಂತರ ಸಿಗುತ್ತದೆ.

Comments are closed.