ನವದೆಹಲಿ: ನೂರಾರು ಮೈಲಿ ಸೈಕಲ್ ನಲ್ಲಿ ಮತ್ತು ಕಾಲ್ನಡಿಗೆಯಲ್ಲಿ ಹೋಗುವ ವಲಸೆ ಕಾರ್ಮಿಕರ ಕಷ್ಟದ ಪರಿಸ್ಥಿತಿ ಬಗ್ಗೆ ಕೊನೆಗೂ ಸುಪ್ರೀಂ ಕೋರ್ಟ್ ಗಮನ ಹರಿಸಿದ್ದು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೊಟೀಸ್ ಕಳುಹಿಸಿದೆ.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಸಂಜಯ್ ಕಿಶನ್ ಕೌಲ್ ಮತ್ತು ಎಂ ಆರ್ ಶಾ ನೇತೃತ್ವದ ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ಕೈಗೊಂಡಿದ್ದರೂ ಕೂಡ ವಲಸೆ ಕಾರ್ಮಿಕರ ವಿಷಯದಲ್ಲಿ ಹಲವು ಅಸಮರ್ಪಕತೆ ಮತ್ತು ನ್ಯೂನತೆಗಳಿವೆ. ವಲಸೆ ಕಾರ್ಮಿಕರ ಪರಿಸ್ಥಿತಿ ಸುಧಾರಿಸಲು ಪರಿಣಾಮಕಾರಿ ಪ್ರಯತ್ನದ ಅಗತ್ಯವಿದೆ ಎಂದು ಹೇಳಿದೆ.
ವಲಸೆ ಕಾರ್ಮಿಕರು ತಮ್ಮೂರಿಗೆ ನಡೆದುಕೊಂಡು ಹೋಗುವುದನ್ನು ಮತ್ತು ರೈಲ್ವೆ ಹಳಿಗಳ ಮೇಲೆ ಹೋಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನ ನ್ಯಾಯಪೀಠವೊಂದು 10 ದಿನಗಳ ಹಿಂದೆ ತಿರಸ್ಕರಿಸಿತ್ತು. ಇದಾದ ಬಳಿಕ ನಿನ್ನೆ ತ್ರಿಸದಸ್ಯ ಪೀಠ ನಿನ್ನೆ ಈ ಪ್ರತಿಕ್ರಿಯೆ ನೀಡಿದೆ.
ವಲಸೆ ಕಾರ್ಮಿಕರು ಸಿಕ್ಕಿಹಾಕಿಕೊಂಡಿರುವ ಸ್ಥಳಗಳಲ್ಲಿ ಅವರಿಗೆ ಆಹಾರ ನೀರು ಒದಗಿಸುತ್ತಿಲ್ಲ. ಇಡೀ ದೇಶದಲ್ಲಿ ಕೊರೋನಾ ಲಾಕ್‌ಡೌನ್‌ನ ಪ್ರಸ್ತುತ ಪರಿಸ್ಥಿತಿಯಲ್ಲಿ, ವಲಸೆ ಕಾರ್ಮಿಕರಿಗೆ ಸರಿಯಾದ ವ್ಯವಸ್ಥೆ, ಸಹಾಯ ಮಾಡಬೇಕಾದ ಅವಶ್ಯಕತೆಯಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
Comments are closed.