ಸಿದ್ದಾರ್ಥ ನಗರ (ಉತ್ತರ ಪ್ರದೇಶ): ಅದೊಂದು ಕೃಷಿ ಭೂಮಿ.. ಅಲ್ಲಿನ ಜನಕ್ಕೆ ನೆಲದ ಆಳದಿಂದ ಮಗುವೊಂದು ಅಳುವ ಶಬ್ಧ ಕೇಳಿ ಬರ್ತಿತ್ತು..! ಇದೇನು ಅಚ್ಚರಿ ಎಂದು ಗುಂಡಿ ತೋಡಿ ನೋಡಿದರೆ, ಅಲ್ಲಿ ಆಗತಾನೇ ಹುಟ್ಟಿದ ಮಗುವನ್ನು ಜೀವಂತವಾಗಿ ಸಮಾಧಿ ಮಾಡಲಾಗಿತ್ತು..!
ಮಣ್ಣು, ಕೆಸರಿನಿಂದ ಆವೃತವಾಗಿದ್ದ ಮಗುವನ್ನು ಕಂಡು ಜನರು ಬೆಚ್ಚಿಬಿದ್ದರು. ಮಗುವಿನ ಕಣ್ಣು, ಮೂಗು, ಬಾಯಿ ಹಾಗೂ ಕಿವಿ ತುಂಬಾ ಮಣ್ಣು ತುಂಬಿಕೊಂಡು ಉಸಿರಾಡಲೂ ಕಷ್ಟಪಡುತ್ತಿತ್ತು. ಕೂಡಲೇ ಪ್ರಥಮ ಚಿಕಿತ್ಸೆ ಆರಂಭಿಸಿದ ಸ್ಥಳೀಯರು ಮಗುವಿಗೆ ಉಸಿರಾಟ ಸಮಸ್ಯೆ ಉಂಟಾಗದಂತೆ ಮಣ್ಣನ್ನು ತೆರವುಗೊಳಿಸಿದರು. ಬಳಿಕ ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದರು.
ಮಗು ಅಳುವ ಶಬ್ಧ ಕೇಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ಮಣ್ಣನ್ನು ಅಗೆದು ಮಗುವನ್ನು ಹೊರತೆಗೆದು, ಶುಭ್ರಗೊಳಿಸಿ ಅದು ಉಸಿರಾಡುವಂತೆ ಮಾಡಿದ ಸ್ಥಳೀಯರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಅದೇ ರೀತಿ ಆಗ ತಾನೇ ಹುಟ್ಟಿದ ಮಗುವನ್ನು ಜೀವಂತವಾಗಿ ಸಮಾಧಿ ಮಾಡಿದ ಕಲ್ಲೆದೆಯ ಪೋಷಕರು ಯಾರು ಎಂದು ಪತ್ತೆ ಮಾಡಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದೀಗ ಮಗು ಸರಕಾರಿ ಆಸ್ಪತ್ರೆಯಲ್ಲಿ ಸುರಕ್ಷಿತವಾಗಿದೆ. ವೈದ್ಯಕೀಯ ಸಿಬ್ಬಂದಿ ಮಗುವನ್ನು ಸಂಪೂರ್ಣವಾಗಿ ಶುಭ್ರಗೊಳಿಸಿ, ಯಾವುದೇ ರೀತಿಯ ಸೋಂಕಿಗೆ ತುತ್ತಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಮಗು ಒಂದಿಷ್ಟು ಮಣ್ಣನ್ನು ಸೇವಿಸಿರಬಹುದು ಎಂದು ವೈದ್ಯರು ಹೇಳಿದ್ದು, ಈ ಸಂಬಂಧ ಚಿಕಿತ್ಸೆ ನೀಡುತ್ತಿದ್ದಾರೆ.
Comments are closed.