ಹೊಸದಿಲ್ಲಿ: ವಲಸೆ ಕಾರ್ಮಿಕರಿಂದ ಯಾವುದೇ ಕಾರಣಕ್ಕೂ ಬಸ್ ಮತ್ತು ರೈಲಿನ ಟಿಕೆಟ್ ದರಗಳನ್ನು ವಸೂಲಿ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಗುರುವಾರ ತಾಕೀತು ಮಾಡಿದೆ.
ರಾಜ್ಯಗಳು ವಲಸೆ ಕಾರ್ಮಿಕರಿಗೆ ಆಹಾರ ನೀಡಬೇಕು ಎಂದೂ ಹೇಳಿರುವ ಸರ್ವೋಚ್ಚ ನ್ಯಾಯಾಲಯ, ರೈಲಿನಲ್ಲಿ ಪ್ರಯಾಣದ ವೇಳೆ ಆಹಾರ ಮತ್ತು ನೀರನ್ನು ನೀಡಬೇಕು ಎಂದೂ ರೈಲ್ವೆ ಇಲಾಖೆಗೆ ಸೂಚಿಸಿದೆ.
ಯಾರಾದರು ವಲಸೆ ಕಾರ್ಮಿಕರು ರಸ್ತೆಯಲ್ಲಿ ನಡೆದುಕೊಂಡು ಪ್ರಯಾಣಿಸುತ್ತಿರುವುದು ಕಂಡಲ್ಲಿ ಕೂಡಲೆ ಅವರನ್ನು ಆಶ್ರಯ ಕೇಂದ್ರಕ್ಕೆ ಕರೆತಂದು ಆಹಾರ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ವಲಸೆ ಕಾರ್ಮಿಕರಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವಲಸಿಗರು ತಮ್ಮ ಊರಿಗೆ ತೆರಳಲು ಪಡುತ್ತಿರುವ ಕಷ್ಟಗಳ ಬಗ್ಗೆ ನಮಗೆ ಕಾಳಜಿ ಇದೆ. ನೋಂದಣಿ, ಸಾರಿಗೆ ಮತ್ತು ಅವರಿಗೆ ಆಹಾರ ಮತ್ತು ನೀರನ್ನು ಒದಗಿಸುವ ಪ್ರಕ್ರಿಯೆಯಲ್ಲಿ ಹಲವು ಲೋಪಗಳಿರುವುದನ್ನು ನಾವು ಗಮನಿಸಿದ್ದೇವೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
Comments are closed.