ದೆಹಲಿ (ಮೇ 28); ಬಿಜೆಪಿ ಪಕ್ಷದ ರಾಷ್ಟ್ರೀಯ ವಕ್ತಾರ ಸಂಬತ್ ಪಾತ್ರ ಅವರಿಗೆ ಕೊರೋನಾ ವೈರಸ್ ಲಕ್ಷಣಗಳು ಕಾಣಿಸಿಕೊಂಡಿದ್ದು ಅವರನ್ನು ಹರಿಯಾಣದ ಗುರುಗ್ರಾಮ್ನಲ್ಲಿರುವ ಮೆಡಂತಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇಷ್ಟು ದಿನ ಜನ ಸಾಮಾನ್ಯರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಮಾರಣಾಂತಿಕ ವೈರಸ್ ಇದೀಗ ರಾಜಕಾರಣಿಗಳಲ್ಲೂ ಕಾಣಿಸಿಕೊಳ್ಳುತ್ತಿದ್ದು ರಾಜಕಾರಣಿಗಳೂ ಸಹ ತಬ್ಬಿಬ್ಬಾಗುವಂತಾಗಿದೆ.
ಬಿಜೆಪಿ ಪಕ್ಷದ ನಾಯಕರಾಗಿರುವ ಸಂಬಿತ್ ಪಾತ್ರ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದು, ಅನೇಕ ಸುದ್ದಿ ವಾಹಿನಿಗಳಲ್ಲಿ ಬಿಜೆಪಿಯ ಮುಖವಾಗಿ ಚರ್ಚೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಈ ಮೂಲಕ ಸಾಕಷ್ಟು ವಿವಾದಗಳನ್ನೂ ಸಹ ಅವರು ಮೈಮೇಲೆ ಎಳೆದುಕೊಂಡಿದ್ದ ಉದಾಹರಣೆಗಳಿವೆ.
ಕೊರೋನಾ ಲಕ್ಷಣ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗುವ ಎರಡು ಗಂಟೆ ಮುಂಚೆ ಸಹ ಅವರು ಟ್ವೀಟ್ ಮಾಡಿದ್ದು, ಬಿಜೆಪಿ ನಾಯಕ ಸುಹೇಲ್ ಸೇಠ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದರು.
ಸಂಬಿತ್ ಪಾತ್ರ ಈ ಹಿಂದೆ ಒಡಿಶಾದ ಪುರಿಯಿಂದ 2019 ರ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಆದರೆ ಬಿಜು ಜನತಾದಳದ ಪಿನಾಕಿ ಮಿಶ್ರಾ ವಿರುದ್ಧ ಹೀನಾಯ ಸೋಲನುಭವಿಸಿದ್ದರು.
ಸಂಬಿತ್ ಪಾತ್ರ ಕುರಿತ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದ್ದಂತೆ ಗುಣಮುಖರಾಗಿ ಬರುವಂತೆ ಹಲವಾರು ಮಂದಿ ಹಾರೈಸಿದ್ದಾರೆ. “ಶೀಘ್ರದಲ್ಲೇ ಗುಣಮುಖರಾಗಿ ಸಾಂಬಿತ್ ಪಾತ್ರ ಭಾಯ್” ಎಂದು ದೆಹಲಿ ಬಿಜೆಪಿ ನಾಯಕ ತಾಜಿಂದರ್ ಪಾಲ್ ಸಿಂಗ್ ಬಗ್ಗಾ ಟ್ವೀಟ್ ಮೂಲಕ ಆಶಿಸಿದ್ದಾರೆ.
ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ 4,531 ಕ್ಕೆ ಏರಿದೆ. 1,58,333 ಪ್ರಕರಣಗಳು ಈವರೆಗೂ ವರದಿಯಾಗಿದ್ದು, ಕಳೆದ 24 ಗಂಟೆಗಳಲ್ಲಿ 194 ಸಾವುಗಳು ಮತ್ತು 6,566 ಪಾಸಿಟಿವ್ ಪ್ರಕರಣಗಳು ಕಂಡುಬಂದಿದೆ.
Comments are closed.