ಲಕ್ನೋ (ಮೇ 30); ಲಾಕ್‌ಡೌನ್‌ನಿಂದಾಗಿ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಡೆತ್‌ನೋಟ್ ಬರೆದಿಟ್ಟು, ಪೂರ್ವ ಉತ್ತರ ಪ್ರದೇಶದಲ್ಲಿ 50 ವರ್ಷದ ವ್ಯಕ್ತಿಯೊಬ್ಬರು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ಘಟನೆಯೊಂದಿಗೆ ಲಾಕ್‌ಡೌನ್ ಆತ್ಮಹತ್ಯೆಗೆಗಳ ಸರಣಿ ಮುಂದುವರೆದಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ಭಾನು ಪ್ರಕಾಶ್ ಗುಪ್ತಾ ಎಂದು ಗುರುತಿಸಲಾಗಿದ್ದು, ಈತನ ದೇಹ ಲಖಿಂಪುರ ಖೇರಿ ಜಿಲ್ಲೆಯ ರೈಲು ಹಳಿಗಳಲ್ಲಿ ಪತ್ತೆಯಾಗಿದೆ, ಅಲ್ಲದೆ, ಅದೇ ಸ್ಥಳದಲ್ಲಿ ಆತ ಬರೆದಿಟ್ಟಿದ್ದ ಆತ್ಮಹತ್ಯೆ ಪತ್ರ ಸಹ ಪತ್ತೆಯಾಗಿದೆ. ಭಾನು ಪ್ರಕಾಶ್ ಗುಪ್ತಾ ಈ ಮೊದಲು ಹತ್ತಿರದ ಶಹಜಹಾನ್ಪುರ ಜಿಲ್ಲೆಯ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಆತನಿಗೆ ಹೆಂಡತಿ, ನಾಲ್ಕು ಮಕ್ಕಳು ಮತ್ತು ಅನಾರೋಗ್ಯಪೀಡಿತ ತಾಯಿ ಇದ್ದಾರೆ ಎಂದು ತಿಳಿದುಬಂದಿದೆ.
ದೇಶದಲ್ಲಿ ಮಾರಣಾಂತಿಕ ಕೊರೋನಾ ವೈರಸ್ ಹರಡುವುದನ್ನು ತಡೆಯುವ ಸಲುವಾಗಿ ಮಾರ್ಚ್. 24 ರಿಂದ ದೇಶದಾದ್ಯಂತ ಲಾಕ್‌ಡೌನ್ ಹೇರಲಾಗಿತ್ತು. ಹೀಗಾಗಿ ಈತ ಕೆಲಸ ನಿರ್ವಹಿಸುತ್ತಿದ್ದ ಹೋಟೆಲ್ ಅನ್ನು ಸಹ ಮುಚ್ಚಲಾಗಿತ್ತು. ಇದರಿಂದ ಈತ ಕೆಲಸ ಕಳೆದುಕೊಂಡು ನಿರುದ್ಯೋಗಿಯಾಗಿದ್ದ. ಲಾಕ್‌ಡೌನ್‌ನಿಂದಾಗಿ ಬೇರೆ ಕೆಲಸವೂ ಸಹ ಸಿಗದಂತಹ ಸ್ಥಿತಿ ನಿರ್ಮಾಣವಾಗಿತ್ತು. ಈ ನಡುವೆ ಆತನ ಬಳಿಯಿದ್ದ ನಗದು ಹಣ ಸಹ ಖಾಲಿಯಾಗಿತ್ತು. ಪರಿಣಾಮ ಇಡೀ ಕುಟುಂಬ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಲಾಕ್‌ಡೌನ್ ಸಮಯದಲ್ಲಿ ತನ್ನ ಕುಟುಂಬ ಎದುರಿಸಿದ ಕಷ್ಟವನ್ನು ಆತ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾರೆ. “ನನ್ನ ಮನೆಗೆ ಗೋಧಿ ಮತ್ತು ಅಕ್ಕಿ ಕೊಟ್ಟಿದ್ದಕ್ಕೆ ಸರ್ಕಾರಿ ಪಡಿತರ ಅಂಗಡಿಗೆ ಧನ್ಯವಾದಗಳು. ಆದರೆ ಕುಟುಂಬ ನಿರ್ವಹಣೆಗೆ ಇದು ಸಾಕಾಗುವುದಿಲ್ಲ, ಸಕ್ಕರೆ, ಉಪ್ಪು ಮತ್ತು ಹಾಲಿನಂತಹ ಇತರ ಅಗತ್ಯ ವಸ್ತುಗಳನ್ನು ಖರೀದಿಸಲು ನನ್ನ ಬಳಿ ಹಣವಿಲ್ಲ” ಎಂದು ನೋವು ತೋಡಿಕೊಂಡಿದ್ದಾರೆ.
ಅಲ್ಲದೆ, ನನ್ನ ವಯಸ್ಸಾದ ತಾಯಿ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಣವಿಲ್ಲದೆ ಅವರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ ಮತ್ತು ಜಿಲ್ಲಾಡಳಿತವು ಸಹಾಯಕ್ಕೆ ಮುಂದಾಗಲಿಲ್ಲ” ಎಂದು ಅವರು ತಮ್ಮ ಡೆತ್‌ನೋಟ್‌ನಲ್ಲಿ ದೂರಿದ್ದಾರೆ.
ಲಾಕ್‌ಡೌನ್‌ನಿಂದಾಗಿ ಆತ್ಮಹತ್ಯೆಗೆ ಶರಣಾಗಿರುವ ಭಾನುಪ್ರಕಾಶ್ ಗುಪ್ತಾ ಸುದ್ದಿ ಇಂದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲೂ ಚರ್ಚೆಗಳು ಶುರುವಾಗಿದೆ. ಇದರ ಬೆನ್ನಿಗೆ ಸ್ಪಷ್ಟನೆ ನೀಡಿರುವ ಉತ್ತರ ಪ್ರದೇಶ ಸರ್ಕಾರ ಮೃತರ ಕುಟುಂಬಕ್ಕೆ ಸೂಕ್ತ ನೆರವು ನೀಡುವುದಾಗಿ ತಿಳಿಸಿದೆ.
ಘಟನೆ ಕುರಿತು ಮಾಹಿತಿ ನೀಡಿರುವ ಲಖಿಂಪುರ ಖೇರಿಯ ಜಿಲ್ಲಾಧಿಕಾರಿ ಶೈಲೇಂದ್ರ ಕುಮಾರ್, “ಆತ್ಮಹತ್ಯೆ ಕುರಿತು ನಾವು ಪ್ರಾಥಮಿಕ ವಿಚಾರಣೆ ನಡೆಸಿದ್ದೇವೆ. ಮೃತ ವ್ಯಕ್ತಿಯ ಕುಟುಂಬಕ್ಕೆ ಪಡಿತರ ಚೀಟಿ ಇದೆ ಮತ್ತು ಅವರ ಕೋಟಾದ ಪ್ರಕಾರ ಈ ತಿಂಗಳು ಧಾನ್ಯವನ್ನು ವಿತರಿಸಲಾಗಿದೆ. ಹಾಗಾಗಿ ಅವರಿಗೆ ಧಾನ್ಯದ ಕೊರತೆಯಿಲ್ಲ. ಆತ್ಮಹತ್ಯೆ ಪತ್ರ ಸಿಕ್ಕಿದ್ದು, ಆತ್ಮಹತ್ಯೆಗೆ ನಿಖರ ಕಾರಣಗಳನ್ನು ನಾವು ತನಿಖೆ ಮಾಡುತ್ತೇವೆ” ತಿಳಿಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಯೇ ಸರ್ಕಾರವು ಇಂದು ತಮ್ಮ ಎರಡನೇ ಅವಧಿಯ ಮೊದಲ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಅದೇ ದಿನ ಉತ್ತರ ಪ್ರದೇಶದಲ್ಲಿ ಓರ್ವ ವ್ಯಕ್ತಿ ಲಾಕ್‌ಡೌನ್‌ನಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡುವ ಮೂಲಕ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿರುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, “
“ಉತ್ತರಪ್ರದೇಶದಲ್ಲಿ ಭಾನು ಗುಪ್ತಾ ಎಂಬ ವ್ಯಕ್ತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಲಾಕ್‌ಡೌನ್ ಕಾರಣದಿಂದಾಗಿ ಆತನ ಕೆಲಸ ಹೋಯಿತು. ಅವರ ತಾಯಿಗೆ ಆತ ಚಿಕಿತ್ಸೆ ನೀಡಬೇಕಾಗಿತ್ತು. ಅವರಿಗೆ ಸರ್ಕಾರದಿಂದ ಕೇವಲ ಪಡಿತರವಷ್ಟೇ ದೊರಕಿದೆ. ಆದರೆ ಜೀವನ ನಿರ್ವಹಣೆಗೆ ಬೇಕಾದ ಉಳಿದ ವಸ್ತುಗಳು ಸಿಗಲಿಲ್ಲ. ಆದರೆ ಇದರ ಗೊಡವೆ ಇಲ್ಲದೇ ಒಂದು ವರ್ಷ ಆಚರಿಸುತ್ತಿರುವ ನಿಮಗೆ ಈ ಪತ್ರವು ತಲುಪದಿರಬಹುದು. ದಯವಿಟ್ಟು ಈ ಪತ್ರವನ್ನು ಓದಿ” ಎಂದು ತಿಳಿಸಿದ್ದಾರೆ.
Comments are closed.