ತಿರುವನಂತಪುರಂ: ಕೊರೊನಾ ಮಹಾಮಾರಿಯ ಅಟ್ಟಹಾಸದಿಂದ ಇದೀಗ ತಗರತಿಗಳೆಲ್ಲವೂ ಆನ್ ಲೈನ್ ನಲ್ಲೇ ನಡೆಯುತ್ತಿದೆ. ಆದರೆ ಇಲ್ಲಿ ಸಮಸ್ಯೆಯೆಂದರೆ ಕೆಲವರಿಗೆ ತರಗತಿಗೆ ಹಾಜರಾಗಲು ನೆಟ್ ವರ್ಕ್ ಇಲ್ಲದೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇರಳದ ಪದವಿ ವಿದ್ಯಾರ್ಥಿನಿಯೊಬ್ಬಳು ಒಳ್ಳೆಯ ಉಪಾಯವೊಂದನ್ನು ಕಂಡುಕೊಂಡಿದ್ದಾಳೆ.
ಹೌದು. ಕುಟ್ಟಿಪುರಂ ಕೆಎಂಸಿಟಿ ಆರ್ಟ್ಸ್ & ಸೈನ್ಸ್ ಕಾಲೇಜಿನ ವಿದ್ಯಾರ್ಥಿನಿ ನಮಿತಾ, ಮೊಬೈಲ್ ನೆಟ್‍ವರ್ಕ್ ಇಲ್ಲವೆಂದು ತನ್ನದೇ ಆದ ಐಡಿಯಾವೊಂದನ್ನು ಕಂಡುಕೊಂಡು ಇದೀಗ ಭಾರೀ ಸುದ್ದಿಯಾಗಿದ್ದಾಳೆ.
ಕೊಟ್ಟಕಲ್ ಸಮೀಪದ ಅರೀಕ್ಕಲ್ ನಿವಾಸಿ ನಮಿತಾ ಬಿಎ ಐದನೇ ಸೆಮಿಸ್ಟರ್ ಇಂಗ್ಲಿಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಆದರೆ ಕೊರೊನಾ ಲಾಕ್ ಡೌನ್ ಪರಿಣಾಮ ಶಾಲಾ-ಕಾಲೇಜುಗಳನ್ನು ಬಂದ್ ಮಾಡಿದ್ದು, ಆನ್ ಲೈನ್ ಮೂಲಕ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಮಿತಾ ತನ್ನ ಮನೆಯ ಮೇಲೆ ಹಂಚಿನಲ್ಲಿ ಮೊಬೈಲ್ ನೆಟ್ ವರ್ಕ್ ಸಿಗುವುದನ್ನು ಕಂಡುಕೊಂಡಿದ್ದಾಳೆ. ಹೀಗಾಗಿ ಸುಮಾರು 4 ಗಂಟೆಗಳ ಕಾಲ ಅಲ್ಲಿಯೇ ಕುಳಿತು ತರಗತಿಗೆ ಹಾಜರಾಗಿದ್ದಾಳೆ.
ಈ ಬಗ್ಗೆ ಮಾತನಾಡಿರುವ ನಮಿತಾ, ನನ್ನ ಮನೆಯ ಸುತ್ತಮುತ್ತ ಎಲ್ಲಾ ಕಡೆ ಮೊಬೈಲ್ ನೆಟ್ ವರ್ಕ್ ಗಾಗಿ ಅಲೆದಾಡಿದ್ದೇನೆ. ಆದರೆ ಎಲ್ಲಿಯೂ ನೆಟ್‍ವರ್ಕ್ ಸಿಗುತ್ತಿರಲಿಲ್ಲ. ಕೊನೆಗೆ ಮನೆಯ ಹಂಚಿನ ಮೇಲೆ ಹೋದಾಗ ಅಲ್ಲಿ ನೆಟ್‍ವರ್ಕ್ ಸಿಕ್ಕಿತ್ತು ಎಂದು ಹೇಳಿದ್ದಾಳೆ.
ಮೊಬೈಲ್ ನೆಟ್ ವರ್ಕ್ ಹುಡುಕಲು ಸಾಕಷ್ಟು ಕಷ್ಟಪಟ್ಟಿದ್ದೇನೆ. ಮನೆಯ ಸುತ್ತಮುತ್ತ ಎಲ್ಲಿಯೂ ನೆಟ್‍ವರ್ಕ್ ಸಿಗದೆ ಪರದಾಡುತ್ತಿದ್ದೆ. ಕೊನೆಗೂ ಮನೆಯ ಮಹಡಿ ಹತ್ತಿ ಕುಳಿತು ಆನ್ ಲೈನ್ ತರಗತಿಗೆ ಹಾಜರಾದೆ. ಸೋಮವಾರ ಹಾಗೂ ಮಂಗಳವಾರ ಛತ್ರಿ ಹಿಡಿದುಕೊಂಡೇ ಪಾಠ ಕೇಳಿದೆ. ಆದರೆ ಬುಧವಾರ ಬಿಸಿಲಿದ್ದರಿಂದ ಆರಮಾಗಿ ತರಗತಿಗೆ ಹಾಜರಾಗಿದ್ದೇನೆ. ಬರೀ ಮಳೆಯಾದರೆ ತೊಂದರೆ ಇಲ್ಲ. ಆದರೆ ಮಿಂಚು ಹಾಗೂ ಗುಡುಗಿನಿಂದಾಗಿ ಸ್ವಲ್ಪ ಭಯವಾಯಿತು. ನನ್ನಂತೆ ಹಲವು ವಿದ್ಯಾರ್ಥಿಗಳು ಮೊಬೈಲ್ ನೆಟ್ ವರ್ಕ್ ಇಲ್ಲದೆ ಕಷ್ಟ ಅನುಭವಿಸುತ್ತಿದ್ದಾರೆ. ಹೀಗೆ ಹಲವರು ಬೇರೆ ಬೇರೆ ವಿಧಾನಗಳ ಮೂಲಕ ಮೊಬೈಲ್ ನೆಟ್‍ವವರ್ಕ್ ಪಡೆದುಕೊಳ್ಳುವ ಮೂಲಕ ಕ್ಲಾಸಿಗೆ ಹಾಜರಾಗಿದ್ದಾರೆ ಎಂದು ತನ್ನ ಅನುಭವ ಹಾಗೂ ಸ್ನೇಹಿತರ ಕಷ್ಟವನ್ನು ಕೂಡ ನಮಿತಾ ಹಂಚಿಕೊಂಡಿದ್ದಾಳೆ.
ನಮಿತಾ ತಂದೆ ಕೆ.ಸಿ ನಾರಾಯಣ್ ಅವರು ಕೋಟಕಲ್ ಆರ್ಯ ವೈದ್ಯ ಶಾಲೆಯ ಉದ್ಯೋಗಿಯಾಗಿದ್ದು, ತಾಯಿ ಎಂ. ಜೀಜಾ ಮಲ್ಲಪುರಂನಲ್ಲಿರುವ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಂದೆ-ತಾಯಿ ಸಹಾಯದಿಂದಾಗಿ ನಮಿತಾ ಮನೆಯ ಮಹಡಿಯಲ್ಲಿ ಕುಳಿತು ತರಗತಿಗೆ ಹಾಜರಾಗಿದ್ದಾಳೆ. ಈಕೆಯ ಸಹೋದರಿ ನಯನಾ ಬಿಎಎಂಎಸ್ 4ನೇ ವರ್ಷದಲ್ಲಿ ಕಲಿಯುತ್ತಿದ್ದು, ಆಕೆಯೂ ತಂಗಿಗೆ ಸಂಪೂರ್ಣ ಸಹಕಾರ ನೀಡಿದ್ದಾಳೆ. ನಾನು ಕೆಲವು ಡಾಟಾ ಆಪರೇಟರ್ ಗಳ ಮೊರೆ ಹೋದೆ. ಆದರೆ ಏನೇ ಮಾಡಿದರೂ ನೆಟ್ ವರ್ಕ್ ಪಡೆಯಲು ಸಾಧ್ಯವಾಗಿರಲಿಲ್ಲ ಎಂದು ನಮಿತಾ ತಂದೆ ಪ್ರತಿಕ್ರಿಯಿಸಿದ್ದಾರೆ.
Comments are closed.