ರಾಷ್ಟ್ರೀಯ

ದೆಹಲಿಯಲ್ಲಿ ಕೊರೋನಾ ಸಮುದಾಯ ಹಂತ ತಲುಪಿದೆ: ಸಚಿವ ಸತ್ಯೇಂದರ್ ಜೈನ್

Pinterest LinkedIn Tumblr


ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ವೈರಸ್ ಸಮುದಾಯ ಹಂತ ತಲುಪಿದ್ದು, ಕೇಂದ್ರ ಸರ್ಕಾರ ಘೋಷಣೆಗಾಗಿ ಕಾಯುತ್ತಿದ್ದೇವೆಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ಮಂಗಳವಾರ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದೆಹಲಿಯಲ್ಲಿ ಕೊರೋನಾ ಸಮುದಾಯ ಹಂತ ತಲುಪಿರುವ ಕುರಿತು ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಅವರೇ ಒಪ್ಪಿಕೊಂಡಿದ್ದಾರೆ. ಇದೀಗ ಘೋಷಣೆ ಮಾಡುವ ವಿಚಾರ ಕೇಂದ್ರ ಸರ್ಕಾರಕ್ಕೆ ಬಿಟ್ಟದ್ದು ಎಂದು ಹೇಳಿದ್ದಾರೆ.

ಈ ಬಗ್ಗೆ ಸ್ವತಃ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಅವರೇ ಮಾತನಾಡಿ, ದೆಹಲಿಯಲ್ಲಿ ಕೊರೋನಾ ಸಮುದಾಯ ಹಂತ ತಲುಪಿರುವುದು ನಿಜ. ಆದರೆ, ಕೇಂದ್ರ ಸರ್ಕಾರ ಇದನ್ನು ಒಪ್ಪಿಕೊಳ್ಳುತ್ತಿಲ್ಲ. ಸಮುದಾಯ ತಲುಪಿರುವ ಕುರಿತು ನಾವು ಘೋಷಣೆ ಮಾಡಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರವೇ ಇದನ್ನು ಘೋಷಣೆ ಮಾಡಬೇಕು ಎಂದು ಹೇಳಿದ್ದಾರೆ.

ಸಮುದಾಯ ಹಂತ ಹರಡಿದೆ ಎಂಬುದು ತಾಂತ್ರಿಕ ಪದವಾಗಿದ್ದು, ಅದನ್ನು ಒಪ್ಪಿಕೊಳ್ಳುವು, ಬಿಡುವುದು ಕೇಂದ್ರಕ್ಕೆ ಬಿಟ್ಟದ್ದಾಗಿದೆ. ಸೋಂಕು ಹರಡುವಿಕೆಯಲ್ಲಿ ನಾಲ್ಕು ಹಂತವಿದ್ದು, ಇದರಲ್ಲಿ ಮೂರನೇ ಹಂತವೇ ಸಮುದಾಯ ಹರಡುವಿಕೆಯಾಗಿದೆ ಎಂದು ಜೈನ್ ಅವರು ತಿಳಿಸಿದ್ದಾರೆ.

ತಮಗೆ ಯಾವ ರೀತಿ ಸೋಂಕು ತಗುಲಿದೆ ಎಂಬುದು ಜನರಿಗೆ ತಿಳಿಯದಿದ್ದಾಗ ನಾವು ಅದನ್ನು ಸಮುದಾಯ ಹಂತವೆಂದು ಕರೆಯುತ್ತೇವೆ. ಇದೇ ರೀತಿ ದೆಹಲಿಯಲ್ಲಿ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ. ದೆಹಲಿಯಲ್ಲಿ ಬೆಳಕಿಗೆ ಬರುತ್ತಿರುವ ಅರ್ಧದಷ್ಟು ಸೋಂಕಿತ ಜನರಿಗೆ ತಮಗೆ ಯಾವ ರೀತಿ ಸೋಂಕು ತಗುಲಿದೆ ಎಂಬುದೇ ತಿಳಿದಿಲ್ಲ ಎಂದಿದ್ದಾರೆ.

ಇದೇ ವೇಳೆ ರಾಜ್ಯಪಾಲ ಅನಿಲ್ ಬೈಜಾಲ್ ವಿರುದ್ಧ ಹರಿಹಾಯ್ದಿರುವ ಸತ್ಯೇಂದರ್ ಜೈನ್ ಅವರು, ಬಿಜೆಪಿ ಒತ್ತಡದಿಂದಾಗಿ ರಾಜ್ಯಪಾಲರು ದೆಹಲಿ ಆಸ್ಪತ್ರೆಯ ಹಾಸಿಗೆಗಳನ್ನು ದೆಹಲಿ ಜನತೆ ಮೀಸಲಿಟ್ಟ ದೆಹಲಿ ಸರ್ಕಾರದ ನಿರ್ಧಾರವನ್ನು ಕೈಬಿಟ್ಟಿದ್ದಾರೆ. ಇದೀಗ ದೆಹಲಿ ಜನತೆಗೆ ಎಲ್ಲಿ ಚಿಕಿತ್ಸೆ ಕೊಡಬೇಕೆಂದು ಸಾಕಷ್ಟು ಕರೆಗಳು ಬರುತ್ತಿವೆ. ದೆಹಲಿ ಹಾಗೂ ಮುಂಬೈಗೆ ಬಹುತೇಕ ವಿಮಾನಗಳು ಬಂದಿಳಿಯುತ್ತಿವೆ. ವಿದೇಶದಿಂದ ದೆಹಲಿಗೆ ಕೊರೋನಾ ಸಾಕಷ್ಟು ಹರಡುತ್ತಿದೆ. ಮುಂಬೈನಲ್ಲಿ 50,000 ಸೋಂಕಿತ ಪ್ರಕರಣಗಳು ಕಂಡು ಬಂದಿದ್ದರೆ, ದೆಹಲಿಯಲ್ಲಿ 30,000 ಪ್ರಕರಣಗಳು ಕಂಡು ಬಂದಿವೆ. ದೆಹಲಿಯಲ್ಲಿ 9,000 ಹಾಸಿಗೆಗಳಷ್ಟೇ ಇದ್ದು, ದೆಹಲಿಯಲ್ಲಿ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಮುಂದಿನ 10 ದಿನಗಳಲ್ಲಿ ಈ ಸಂಖ್ಯೆ 50,000 ತಲುಪುವ ಸಾಧ್ಯತೆಗಳಿವೆ. ದೆಹಲಿ ಜನತೆ ಎಲ್ಲಿ ಚಿಕಿತ್ಸೆ ಪಡೆಯಬೇಕೆಂದು ಜನರು ಚಿಂತೆಗೀಡಾಗಿದ್ದಾರೆ.

ಹೊರಗಿನಂದ ಬಂದವರೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ದೆಹಲಿ ಜನತೆಗೆಲ್ಲಿ ಚಿಕಿತ್ಸೆ ನೀಡಬೇಕು? ಈ ಪ್ರಶ್ನೆಗೆ ರಾಜ್ಯಪಾಲರು ಉತ್ತರ ನೀಡಲಿ ಎಂದಿದ್ದಾರೆ.

Comments are closed.