ಚೆನ್ನೈ (ಜೂನ್ 17); ಮಹಾರಾಷ್ಟ್ರ ಮತ್ತು ದೆಹಲಿ ನಂತರ ಅತಿಹೆಚ್ಚು ಕೊರೋನಾ ಪ್ರಕರಣಗಳನ್ನು ಹೊಂದಿರುವ ನೆರೆ ರಾಜ್ಯ ತಮಿಳುನಾಡಿನಲ್ಲಿ ಇಂದೂ ಸಹ 2,174 ಹೊಸ ಪ್ರಕರಣಗಳು ದಾಖಲಾಗಿದ್ದು, ಪ್ರಕರಣಗಳ ಸಂಖ್ಯೆ 50,000 ಗಡಿ ದಾಟಿದೆ. ಅಲ್ಲದೆ, ಕೊರೋನಾ ಸೋಂಕಿಗೆ 48 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆಯೂ 576ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ತಮಿಳುನಾಡು ಸರ್ಕಾರ ಏನೇ ಕ್ರಮ ಜರುಗಿಸಿದರೂ ಸಹ ಕೊರೋನಾ ಸೋಂಕು ಹರಡುವ ವೇಗವನ್ನು ನಿಯಂತ್ರಿಸುವುದು ಸಾಧ್ಯವಾಗುತ್ತಿಲ್ಲ. ಒಂದು ದಿನಕ್ಕೆ ಸರಾಸರಿಯಾಗಿ 2,000ಕ್ಕೂ ಅಧಿಕ ಜನ ಈ ಸೋಂಕಿಗೆ ತುತ್ತಾಗುತ್ತಿರುವುದು ಅಲ್ಲಿನ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಅಲ್ಲದೆ, ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಮೂಲಭೂತ ಸೌಕರ್ಯದ ಕೊರತೆಯನ್ನೂ ತಮಿಳುನಾಡು ಸರ್ಕಾರ ಎದುರಿಸುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ತಮಿಳುನಾಡಿನ ರಾಜಧಾನಿ ಚೆನ್ನೈ ಮತ್ತು ಅದರ ಸುತ್ತಲ ನಗರದಲ್ಲಿ ಕೊರೋನಾ ಪ್ರಭಾವ ಮಿತಿ ಮೀರಿದ್ದು ನಿಯಂತ್ರಿಸುವುದು ಅಸಾಧ್ಯವಾಗಿದೆ. ಇದೇ ಕಾರಣಕ್ಕೆ ಮದ್ರಾಸ್ ಹೈಕೋರ್ಟ್ ಚೆನ್ನೈನಲ್ಲಿ ಮತ್ತೊಮ್ಮೆ ಏಕೆ ಲಾಕ್ಡೌನ್ ಜಾರಿ ಮಾಡಬಾರದು? ಎಂದು ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿತ್ತು.
Comments are closed.