ರಾಷ್ಟ್ರೀಯ

ಕೊರೊನಾ: ಇಡ್ಲಿ ಮಾರುತ್ತಿರುವ ಶಾಲಾ ಪ್ರಾಂಶುಪಾಲ!

Pinterest LinkedIn Tumblr


ಖಮ್ಮಂ: ಮಾರಕ ಕೊರೊನಾ ವೈರಸ್ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವುದು ಮಾತ್ರವಲ್ಲ, ಬದಲಿಗೆ ಜೀವನ ಸಾಗಿಸಲು ಬೇಕಾದ ಉದ್ಯೋಗವನ್ನೂ ಕಸಿದುಕೊಳ್ಳುತ್ತಿರುವುದು ಆತಂಕದ ಸಂಗತಿ.

ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಹೇರಲಾಗಿದ್ದ ಸರಣಿ ಲಾಕ್‌ಡೌನ್ ಪರಿಣಾಮವಾಗಿ ಈಗಾಗಲೇ ದೇಶದಲ್ಲಿ ಉದ್ಯೋಗ ಕಡಿತದ ದುಷ್ಪರಿಣಾಮಗಳು ಗೋಚರವಾಗುತ್ತಿವೆ. ಎಲ್ಲ ಕ್ಷೇತ್ರಗಳಲ್ಲೂ ಉದ್ಯೋಗ ಕಡಿತ ಆರಂಭವಾಗಿದ್ದು, ಆರ್ಥಿಕ ಹೊಡೆತದ ಪರಿಣಾಮಗಳು ಸ್ಪಷ್ಟವಾಗಿ ಕಾಣತೊಡಗಿವೆ.

ಅದರಂತೆ ತೆಲಂಗಾಣ ಜಿಲ್ಲೆಯ ಖಮ್ಮಂ ಜಿಲ್ಲೆಯಲ್ಲಿರುವ ಖಾಸಗಿ ಶಾಲೆಯೊಂದರ ಪ್ರಾಂಶುಪಾಲರೋರ್ವ, ಜೀವನ ನಿರ್ವಹಣೆಗಾಗಿ ರಸ್ತೆ ಬದಿ ಇಡ್ಲಿ ಹಾಗೂ ದೋಸೆ ಮಾರುವ ಅಂಗಡಿ ಹಾಕಿಕೊಂಡಿರುವುದು ಸಮಸ್ಯೆಯ ಗಂಭೀರತೆಯನ್ನು ತಿಳಿಸುತ್ತಿದೆ.

ಹೌದು, ಖಮ್ಮಂ ಜಿಲ್ಲೆಯಲ್ಲಿ ಖಾಸಗಿ ಶಾಲೆಯಲ್ಲಿ ಪ್ರಾಂಶುಪಾಲರಾಗಿದ್ದವರು, ಇದೀಗ ಜೀವನ ನಿರ್ವಹಣೆಗಾಗಿ ರಸ್ತೆ ಬದಿ ಇಡ್ಲಿ ಮಾರುತ್ತಿದ್ದಾರೆ. ಶಾಲೆಗಳು ಬಂದ್ ಆಗಿರುವುದರಿಂದ ಶಾಲಾ ಆಡಳಿತ ಮಂಡಳಿ, ಶಿಕ್ಷಕರಿಗೆ ವೇತನ ನೀಡದಿರುವುದರಿಂದ ಅವರು ರಸ್ತೆ ಬದಿ ಇಡ್ಲಿ ಹಾಗೂ ದೋಸೆ ಮಾರುತ್ತಾ ಜೀವನ ಸಾಗಿಸುತ್ತಿದ್ದಾರೆ.

ಇದು ಕೇವಲ ಒಬ್ಬರ ಕತೆಯಾಗಿರದೇ ದೇಶದ ಬಹುತೇಕ ಖಾಸಗಿ ಶಾಲಾ ಶಿಕ್ಷಕರ ಬದುಕು ದುಸ್ತರವಾಗಿರುವುದು ಕಂಡುಬರುತ್ತಿದೆ. ಕೆಲವರು ತಮ್ಮ ಹಳ್ಳಿಗಳಿಗೆ ವಾಪಸ್ ಹೋಗಿ ಕೃಷಿ ಮಾಡುತ್ತಿದ್ದರೆ ಮತ್ತೆ ಕೆಲವರು ನಗರಗಳಲ್ಲಿ ಬೇರೆ ಬೇರೆ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ.

ಖಾಸಗಿ ಶಾಲೆಗಳಲ್ಲಿ ಉತ್ತಮ ವೇತನ ಪಡೆಯುತ್ತಿದ್ದವರೂ ಇದೀಗ ಶೂನ್ಯ ವೇತನಕ್ಕೆ ಬಂದಿಳಿದಿದ್ದು, ಜೀವನ ನಿರ್ವಹಣೆಗಾಗಿ ಇತರ ಆದಾಯ ಮೂಲಗಳತ್ತ ಹೆಜ್ಜೆ ಇಡುತ್ತಿದ್ದಾರೆ.

ಆದರೆ ಸದ್ಯದ ಸಂದರ್ಭದಲ್ಲಿ ಶಿಕ್ಷಕರಿಗೆ ವೇತನ ನೀಡಲು ಖಾಸಗಿ ಶಾಲೆಗಳಿಗೂ ಸಾಧ್ಯವಿಲ್ಲ ಎಂಬುದು ನ್ಯಾಯಯುತ ವಾದವೇ ಆಗಿದೆ. ಶಾಲೆಗಳು ಬಂದ್ ಆಗಿದ್ದು, ವಿದ್ಯಾರ್ಥಿಗಳಿಂದ ಶಾಲಾ ಶುಲ್ಕವನ್ನೂ ಪಡೆಯುತ್ತಿಲ್ಲವಾದ್ದರಿಂದ ಶಿಕ್ಷಕರಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ.

Comments are closed.