ನವದೆಹಲಿ: ಪ್ರಮುಖ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಸರ್ಕಾರಿ ಇ-ಮಾರುಕಟ್ಟೆ (GeM-Government e-Marketplace)ಯಲ್ಲಿ ಉತ್ಪನ್ನಗಳ ನೋಂದಣಿಗೆ ಉತ್ಪನ್ನದ ಮೂಲ ದೇಶದ ಮಾಹಿತಿ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ.
ಈ ಬಗ್ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಟ್ವೀಟ್ ಮಾಡಿದ್ದು, ಮೇಕ್ ಇಂಡಿಯಾ ಹಾಗೂ ಸ್ವಾವಲಂಭಿ ಭಾರತ್ ಮಿಷನ್ ಗೆ ಒಟ್ಟು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಸರ್ಕಾರಿ ಇ-ಮಾರುಕಟ್ಟೆ (GeM-Government e-Marketplace)ಯಲ್ಲಿ ಉತ್ಪನ್ನಗಳ ನೋಂದಣಿಗೆ ಉತ್ಪನ್ನದ ಮೂಲ ದೇಶದ ಮಾಹಿತಿ ಕಡ್ಡಾಯ ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ.
ಅದರಂತೆ ಸರ್ಕಾರಿ ಇ-ಮಾರುಕಟ್ಟೆ (Government e-Marketplace) ಮೇಲೆ ಇನ್ಮುಂದೆ ಉತ್ಪನ್ನಗಳ ನೋಂದಣಿ ಮಾಡಲು ‘ಕಂಟ್ರಿ ಆಫ್ ಓರಿಜಿನ್’ (ಉತ್ಪನ್ನದ ಮೂಲ ದೇಶ) ಹೇಳುವುದು ಅನಿವಾರ್ಯವಾಗಿದೆ. ಹೀಗಾಗಿ ಎಲ್ಲಾ ಮಾರಾಟಗಾರರು ತಮ್ಮ ಉತ್ಪನ್ನದ ಮೂಲದ ದೇಶದ ಬಗ್ಗೆ ಮಾಹಿತಿಯನ್ನು ನೀಡಬೇಕಾಗುತ್ತದೆ. ಉತ್ಪನ್ನ ಮತ್ತು ಉತ್ಪನ್ನದ ಮೂಲದ ಬಗ್ಗೆ ಎಲ್ಲಾ ಮಾಹಿತಿಯನ್ನು ನೀಡದಿದ್ದರೆ, ಆ ಉತ್ಪನ್ನವನ್ನು ಜಿಇಎಂ ಪ್ಲಾಟ್ ಫಾರ್ಮ್‌ನಿಂದ ತೆಗೆದು ಹಾಕಲಾಗುವುದು ಎಂದು ಸರ್ಕಾರ ಹೇಳಿದೆ.
ಇದು ಜಿಇಎಂಗೆ ನೋಂದಣಿಯಾಗುವ ಹೊಸ ಉತ್ಪಾದಕರಿಗೆ ಮಾತ್ರವಲ್ಲದೇ ಹಳೆಯ ನೋಂದಾಯಿತ ಉತ್ಪಾದಕರಿಗೂ ಅನ್ವಯವಾಗಲಿದೆ. ಅಂದರೆ GeM ನ ಈ ನೂತನ ವೈಶಿಷ್ಯ ಜಾರಿಯಾಗುವುದಕ್ಕೂ ಮೊದಲು ಯಾವ ಮಾರಾಟಗಾರರು ತಮ್ಮ ಉತ್ಪನ್ನಗಳನ್ನು ಈಗಾಗಲೇ ಅಪ್ಲೋಡ್ ಮಾಡಿದ್ದಾರೆಯೋ ಅವರೂ ಕೂಡ ತಮ್ಮ ಉತ್ಪನ್ನದ ಮಾಹಿತಿಯನ್ನು ನವೀಕರಿಸಿ ಅದರಲ್ಲಿ ‘ಕಂಟ್ರಿ ಆಫ್ ಓರಿಜಿನ್’ ನಮೂದಿಸ ಬೇಕು. ಇದಕ್ಕಾಗಿ ಅವರಿಗೆ ನಿರಂತರವಾಗಿ ರಿಮೈಂಡರ್ ಕಳುಹಿಸಲಾಗುವುದು ಎಂದು ಸರ್ಕಾರ ಹೇಳಿದೆ. ರಿಮೈಂಡರ್ ಕಳುಹಿಸಿದ ಬಳಿಕವೂ ಕೂಡ ತಮ್ಮ ಉತ್ಪನ್ನಗಳ ಮಾಹಿತಿಯನ್ನು ನವೀಕರಿಸಿ ಅಪ್ಲೋಡ್ ಮಾಡದೆ ಹೋದಲ್ಲಿ ಅಂತಹ ಉತ್ಪನ್ನ ಗಳನ್ನು ಪ್ಲಾಟ್ಫಾರ್ಮ್ ನಿಂದ ತೆಗೆದುಹಾಕಲಾಗುವುದು ಎಂದು ಸರ್ಕಾರ ಹೇಳಿದೆ.
ಹೀಗಾಗಿ ಇನ್ಮುಂದೆ ಮಾರಾಟಗಾರರಿಗೆ ಅವರ ಉತ್ಪನ್ನ ಎಲ್ಲಿ ತಯಾರಿಸಲಾಗಿದೆ ಅಥವಾ ಉತ್ಪನ್ನವನ್ನು ಎಲ್ಲಿಂದ ಆಮದು ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ನೀಡುವುದು ಅನಿವಾರ್ಯವಾಗಲಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (ಜಿಇಎಂ) ‘ಮೇಕ್ ಇನ್ ಇಂಡಿಯಾ’ ಮತ್ತು ‘ಸ್ವಾವಲಂಬಿ ಭಾರತ’ವನ್ನು ಉತ್ತೇಜಿಸಲು ಈ ಕ್ರಮವನ್ನು ಕೈಗೊಂಡಿದೆ. ಉತ್ಪನ್ನದಲ್ಲಿ ಸ್ಥಳೀಯ ಅಂಶ ಎಷ್ಟು ಇದೆ ಎಂಬುದನ್ನು ಸೂಚಿಸಲು ಜಿಇಎಂ ಒಂದು ನಿಬಂಧನೆಯನ್ನು ಸಹ ಮಾಡಿದೆ. ಹೊಸ ವೈಶಿಷ್ಟ್ಯದ ನಂತರ, ಇ-ಮಾರುಕಟ್ಟೆ ಸ್ಥಳದಲ್ಲಿ ನೋಂದಾಯಿಸಲಾದ ಪ್ರತಿಯೊಂದು ವಸ್ತುವಿನ ಮುಂದೆ ‘ಕಂಟ್ರಿ ಆಫ್ ಒರಿಜಿನ್’ ಮತ್ತು ಸ್ಥಳೀಯ ವಿಷಯದ ಶೇಕಡಾವಾರು ಮಾಹಿತಿಯನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗುತ್ತದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಈಗ ‘ಮೇಕ್ ಇನ್ ಇಂಡಿಯಾ’ ಫಿಲ್ಟರ್ ಪೋರ್ಟಲ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. ಖರೀದಿದಾರರು ಈಗ ಕನಿಷ್ಠ 50 ಪ್ರತಿಶತ ಉತ್ಪನ್ನಗಳನ್ನು ಸ್ಥಳೀಯ ಪದಾರ್ಥಗಳೊಂದಿಗೆ ಖರೀದಿಸುವ ಆಯ್ಕೆಯನ್ನು ಹೊಂದಿರಲಿದ್ದಾರೆ.
Comments are closed.