ಹೈದರಾಬಾದ್: ಪಾರ್ಟನರ್ಸ್ ಇನ್ ಕ್ರೈಮ್ ಅಂತಾರಲ್ಲಾ, ಇದು ಒಂದು ರೀತಿಯಲ್ಲಿ ಅದೇ ಕತೆ. ಬರೋಬ್ಬರಿ 500 ಕೋಟಿ ರೂ. ಹಗರಣದ ಆರೋಪಿಯೊಬ್ಬ ಅಕ್ರಮ ಸಂಬಂಧದ ಕಾರಣಕ್ಕೆ ತನ್ನ ಪತ್ನಿಯಿಂದಲೇ ಕೊಲೆಗೀಡಾದ ವಿಚಿತ್ರ ಕತೆ ಇದು.
ತಮಿಳುನಾಡಿನಲ್ಲಿ ಬರೋಬ್ಬರಿ 500 ಕೋಟಿ ರೂ. ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಮೆಲಂಗೆ ಜಾನ್ ಪ್ರಭಾಕರನ್ ಎಂಬಾತನನ್ನು 2013ರಲ್ಲಿ ಬಂಧಿಸಲಾಗಿತ್ತು. ಹಗರಣದಲ್ಲಿ ಪತಿಗೆ ಜೊತೆಯಾಗಿದ್ದ ಪತ್ನಿ ಮೆಲಂಗೆ ಸುಕನ್ಯಾಳನ್ನೂ ಪೊಲೀಸರು ಬಂಧಿಸಿದ್ದರು.
ಆದರೆ ಕೆಲವೇ ತಿಂಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಬಂದ ಜಾನ್ ಪ್ರಭಾಕರನ್, ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ನೆಲೆಸಿದ್ದ. ಆದರೆ ಪತ್ನಿ ಸುಕನ್ಯಾ ಮಾತ್ರ 2018ರವರೆಗೆ ಜೈಲುಶಿಕ್ಷೆ ಅನುಭವಿಸಿದ್ದಳು.
ಅದರಂತೆ ಕಳೆದ ಜೂನ್ 15ರಂದು ಪತಿ ನೆಲೆಸಿರುವ ಹೈದರಾಬಾದ್‌ಗೆ ಬಂದ ಸುಕನ್ಯಾಳಿಗೆ, ಪತಿ ಮತ್ತೋರ್ವ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದು ಗೊತ್ತಾಗಿದೆ.
ಅಲ್ಲದೇ ಮರಳಿ ತಮಿಳುನಾಡಿಗೆ ಹೋಗುವಂತೆ ಸುಕನ್ಯಾಳ ಮೇಲೆ ಒತ್ತಾಯ ಹೇರಿದ ಪ್ರಭಾಕರನ್, ಜೀವ ಬೆದರಿಕೆಯನ್ನೂ ಹಾಕಿದ್ದಾನೆ ಎನ್ನಲಾಗಿದೆ. ಇದರಿಂದ ಕುಪಿತಗೊಂಡ ಸುಕನ್ಯಾ, ಆತನನ್ನು ಕೊಲೆ ಮಾಡಿದ್ದಾಳೆ.
ಪೊಲೀಸ್ ತನಿಖೆಯ ಸಂದರ್ಭದಲ್ಲಿ ಗಂಡನಿಗೆ ಪಾರ್ಶ್ವವಾಯು ಹೊಡೆದಿದ್ದರಿಂದ ಆತ ಮೃತಪಟ್ಟಿರುವುದಾಗಿ ಹೇಳಿದ್ದ ಸುಕನ್ಯಾ, ಕೊನೆಯಲ್ಲಿ ತಾನೇ ಪ್ರಭಾಕರನ್‌ನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಸದ್ಯ ಸುಕನ್ಯಾಳನ್ನು ಬಂಧಿಸಿರುವ ನಗರದ ಮಲಕಾಜ್‌ಗಿರಿ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Comments are closed.