ರಾಷ್ಟ್ರೀಯ

59 ಚೀನಾ ಮೂಲದ ಮೊಬೈಲ್ ಆ್ಯಪ್ ಗಳ ನಿಷೇಧ; ಹೂಡಿಕೆದಾರರ ಕಾನೂನು-ಹಕ್ಕು ರಕ್ಷಣೆ ಭಾರತ ಸರ್ಕಾರದ ಹೊಣೆ ಎಂದ ಚೀನಾ ವಕ್ತಾರ

Pinterest LinkedIn Tumblr

ನವದೆಹಲಿ: ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸೋರಿಕೆ ಕಾರಣ ನೀಡಿ ಭಾರತ ಸರ್ಕಾರ 59 ಚೀನಾ ಮೂಲದ ಮೊಬೈಲ್ ಆ್ಯಪ್ ಗಳನ್ನು ನಿಷೇಧಿಸಿದ ಬೆನ್ನಲ್ಲೇ ಇದಕ್ಕೆ ಚೀನಾ ಸರ್ಕಾರ ತೀವ್ರ ಆತಂಕ ವ್ಯಕ್ತಪಡಿಸಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಅವರು, ಭಾರತ ಸರ್ಕಾರದ ನಡೆ ‘ತೀವ್ರ ಆತಂಕ’ಕಾರಿಯಾಗಿದೆ. ಈ ಕುರಿತಂತೆ ಪರಿಸ್ಥಿತಿ ಚೀನಾ ಸರ್ಕಾರ ಪರಾಮರ್ಶಿಸುತ್ತಿದೆ ಎಂದು ಹೇಳಿದ್ದಾರೆ.

ಅಂತೆಯೇ ನಾನು ಈ ಮೂಲಕ ಸ್ಪಷ್ಟಪಡಿಸುವುದೇನೆಂದೆರೆ, ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಕಾನೂನು-ನಿಬಂಧನೆಗಳನ್ನು ಪಾಲಿಸುವಂತೆ ಚೀನೀ ಸರ್ಕಾರ ಯಾವಾಗಲೂ ಚೀನಾ ಮೂಲದ ಸಂಸ್ಥೆಗಳಿಗೆ ಹೇಳುತ್ತದೆ. ಅಂತೆಯೇ ಚೀನಾ ಸೇರಿದಂತೆ ಅಂತಾರಾಷ್ಟ್ರೀಯ ಹೂಡಿಕೆದಾರರ ಕಾನೂನು ಹಕ್ಕುಗಳನ್ನು ಎತ್ತಿಹಿಡಿಯುವ ಜವಾಬ್ದಾರಿಯನ್ನು ಭಾರತ ಸರ್ಕಾರ ಹೊಂದಿದೆ ಎಂದೂ ಅವರು ಹೇಳಿದ್ದಾರೆ.

ನಿನ್ನೆಯಷ್ಟೇ ಭಾರತ ಸರ್ಕಾರ ಜನಪ್ರಿಯ ವೀಡಿಯೋ ಶೇರಿಂಗ್ ಆ್ಯಪ್ ಟಿಕ್ ಟಾಕ್ ಹಾಗೂ ವಿ ಚಾಟ್ ಸೇರಿದಂತೆ 59 ಚೀನಾ ಮೂಲದ ಆ್ಯಪ್ ಗಳ ಬಳಕೆಗೆ ನಿಷೇಧ ಹೇರಿತ್ತು.

ಭಾರತ ಮತ್ತು ಚೀನಾ ನಡುವೆ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹಳಸಿದ್ದು, ಈ ಹಿಂದೆ ಪ್ರಧಾನಿ ಮೋದಿ ಕೂಡ ಸೈನಿಕರ ಬಲಿದಾನ ವ್ಯರ್ಥವಾಗುವುದಿಲ್ಲ ಎಂದು ಹೇಳಿ ಚೀನಾ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಪರೋಕ್ಷ ಮುನ್ಸೂಚನೆ ನೀಡಿದ್ದರು. ಈ ಬೆಳವಣಿಗೆ ನಡುವೆಯೇ ಭಾರತ ಸರ್ಕಾರದ ಈ ನಡೆ ಇದೀಗ ಕುತೂಹಲ ಕೆರಳಿಸಿದೆ.

Comments are closed.