ರಾಷ್ಟ್ರೀಯ

ಕಾನ್ಪುರದಲ್ಲಿ ಕುಖ್ಯಾತ ರೌಡಿ ಬಂಧಿಸಲು ಹೋದವರ ಮೇಲೆ ಗುಂಡಿನ ದಾಳಿ; ಮೃತಪಟ್ಟ 8 ಪೊಲೀಸರು

Pinterest LinkedIn Tumblr


ಕಾನ್ಪುರ (ಜು.3): ಕುಖ್ಯಾತ ಗ್ಯಾಂಗಸ್ಟರ್​​ನನ್ನು ಬಂಧಿಸಲು ಹೋದವರ ಮೇಲೆಯೇ ಗುಂಡಿನ ದಾಳಿ ನಡೆದಿದ್ದು, ಈ ವೇಳೆ ಎಸ್​ಪಿ ಸೇರಿ 8 ಜನ ಪೊಲೀಸರು ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ.

ಕಾನ್ಪುರದ ಬಿಕ್ರಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ಈ ಘಟನೆ ನಡೆದಿದೆ. ಕುಖ್ಯಾತ ಗ್ಯಾಂಗಸ್ಟರ್​ ವಿಕಾಸ್​ ಡೂಬೆಯನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಆತ ಅಡಗಿದ್ದ ಮನೆಯೊಳಗೆ ನುಗ್ಗಿ ಆತನನ್ನು ಹಿಡಿದೇ ತರುತ್ತೇವೆ ಎನ್ನುವ ನಿರ್ಧಾರಕ್ಕೆ ಪೊಲೀಸರು ಬಂದಿದ್ದರು.

ಪೊಲೀಸರು ವಿಕಾಸ್ ಅಡಗಿ ಕೂತಿದ್ದ ಮನೆ ತಲುಪುತ್ತಿದ್ದಂತೆ ಟೆರೇಸ್​ ಮೇಲಿನಿಂದ 8-10 ಜನರು ಗುಂಡಿನ ದಾಳಿ ನಡೆಸಿದ್ದಾರೆ. ಶಿವರಾಜ್​ಪುರ ಪೊಲೀಸ್​ ಠಾಣಾಧಿಕಾರಿ ಮಹೇಶ್​ ಯಾದವ್​, ಸಬ್​ ಇನ್ಸ್​ಪೆಕ್ಟರ್​, ಐದು ಕಾನ್​​ಸ್ಟೇಬಲ್​ ಹಾಗೂ ಮತ್ತೋರ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಕಾಸ್​ ಡೂಬೆಯನ್ನು ಬಂಧಿಸಲು ಮುಂದಾದಾಗ ಈ ಘಟನೆ ನಡೆದಿದೆ. 8 ಪೊಲೀಸರು ಸ್ಥಳದಲ್ಲೇ ಮೃತಪಟ್ಟರೆ, ನಾಲ್ಕು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೇರೆ ಜಿಲ್ಲೆಗಳಿಂದ ಪೊಲೀಸರಿಗೆ ಬರುವಂತೆ ನಾವು ಹೇಳಿದ್ದೇವೆ ಎಂದು ಕಾನ್ಪುರ್​ ಎಡಿಜಿ ಜೆಎನ್​ ಸಿಂಗ್​ ಹೇಳಿದ್ದಾರೆ.

ಈ ಘಟನೆ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಬೇಸರ ಹೊರ ಹಾಕಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಕೋರಿದ್ದು, ಗೂಂಡಾಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ವಿಕಾಸ್​ ವಿರುದ್ಧ ಸುಮಾರು 60ಕ್ಕೂ ಹೆಚ್ಚು ಪ್ರಕರಣಗಳಿವೆ. ಉತ್ತರ ಪ್ರದೇಶದಲ್ಲಿ ರಾಜನಾಥ್​ ಸಿಂಗ್ ಸರ್ಕಾರವಿದ್ದಾಗ ಮಂತ್ರಿ ಆಗಿದ್ದ ಸಂತೋಷ್​ ಶುಕ್ಲಾ ಸೇರಿ ಸಾಕಷ್ಟು ಜನರನ್ನು ಹತ್ಯೆ ಮಾಡಿದ ಕೇಸ್​ನಲ್ಲಿ ಈತ ಪ್ರಮುಖ ಪಾತ್ರವಹಿಸಿದ್ದ.

Comments are closed.