ರಾಷ್ಟ್ರೀಯ

ಆಸ್ಪತ್ರೆಯಲ್ಲಿ ಅದಲು ಬದಲಾದ ಹಿಂದು-ಮುಸ್ಲಿಂ ಶವ; ಸ್ಮಶಾನದಲ್ಲಿ ಬಯಲಾದ ಎಡವಟ್ಟು

Pinterest LinkedIn Tumblr


ನವದೆಹಲಿ (ಜು.8): ಕೊರೋನಾ ವೈರಸ್ ಹೆಚ್ಚುತ್ತಿದೆ. ಈ ಮಧ್ಯೆ ಕೆಲವು ಕಡೆಗಳಲ್ಲಿ ಶವ ಹೂಳಲೂ ಸಮಸ್ಯೆ ಉಂಟಾಗುತ್ತಿದೆ. ಈ ಮಧ್ಯೆ, ದೆಹಲಿ AIIMS ವೈದ್ಯರು ಶವ ಅದಲು ಬದಲು ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.

ಮಂಗಳವಾರ ಬೆಳಗ್ಗೆ 7 ಗಂಟೆಗೆ ದೆಹಲಿಯಲ್ಲಿ ವಾಸವಾಗಿರುವ ನಸ್ರೀನ್ (ಹೆಸರು ಬದಲಾಯಿಸಲಾಗಿದೆ) ಕುಟುಂಬಕ್ಕೆ ಆಸ್ಪತ್ರೆಯಿಂದ ಕರೆ ಬಂದಿತ್ತು. ನಸ್ರೀನ್ ಕೊರೋನಾದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದರು. ಆಘಾತಗೊಂಡ ಕುಟುಂಬ 8 ಗಂಟೆಗೆ ಆಸ್ಪತ್ರೆ ತಲುಪಿತ್ತು.

ಶವ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಿ, ನಾವು ಶವವನ್ನು ಸಂಪೂರ್ಣವಾಗಿ ಪ್ಯಾಕ್ ಮಾಡಿ ನಿಮಗೆ ಒಪ್ಪಿಸುತ್ತೇವೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದರು. ಮಧ್ಯಾಹ್ನದ ವೇಳೆಗೆ ನಸ್ರೀನ್ ಶವವನ್ನು ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಿ ಕುಟುಂಬಕ್ಕೆ ನೀಡಲಾಗಿತ್ತು. ಅಲ್ಲದೆ, ಇಬ್ಬರು ಸಿಬ್ಬಂದಿ ಕುಟುಂಬದ ಜೊತೆ ತೆರಳಿದ್ದರು.

ಶವ ಅಂತ್ಯ ಸಂಸ್ಕಾರಕ್ಕೂ ಮೊದಲು ನಸ್ರೀನ್ ಸಹೋದರ ಆಕೆಯ ಮುಖ ನೋಡುವ ಇಚ್ಛೆ ವ್ಯಕ್ತಪಡಿಸಿದ್ದರು. ನಸ್ರೀನ್ ಕುಟುಂಬದಿಂದ ಸಿಬ್ಬಂದಿ 500 ರೂಪಾಯಿ ಪಡೆದು ಕೊನೆಯದಾಗಿ ಮುಖ ನೋಡಲು ಅವಕಾಶ ಮಾಡಿಕೊಟ್ಟಿದ್ದರು. ಪ್ಲಾಸ್ಟಿಕ್ ಕವರ್ ತೆಗೆಯುತ್ತಿದ್ದಂತೆ ಕುಟುಂಬಕ್ಕೆ ಶಾಕ್ ಆಗಿತ್ತು! ಏಕೆಂದರೆ ಅಲ್ಲಿ ನಸ್ರೀನ್ ಶವ ಇರಲೇ ಇಲ್ಲ! ಬದಲಿಗೆ ಬೇರೆ ಯಾರದ್ದೋ ಶವ ಇತ್ತು.

ಈ ಬಗ್ಗೆ ಆಸ್ಪತ್ರೆಗೆ ಕೇಳಿದಾಗ, ಅವರಿಗೆ ತಾವು ಮಾಡಿದ ಎಡವಟ್ಟು ಅರ್ಥವಾಗಿದೆ. ನಸ್ರೀನ್ ಬದಲಿಗೆ ಆರತಿ (ಹೆಸರು ಬದಲಾಯಿಸಲಾಗಿದೆ) ಶವ ನಿಮ್ಮ ಬಳಿ ಬಂದಿದೆ. ಅವರ ಕುಟುಂಬದಿಂದ ಶವ ಮರಳಿ ಪಡೆದು ನಿಮಗೆ ನೀಡುತ್ತೇವೆ ಎಂದು ವೈದ್ಯರು ತಿಳಿಸಿದ್ದರು. ಅದಾಗಲೇ ಹಿಂದು ಕುಟುಂಬದವರು ಶವದ ಮುಖವನ್ನು ನೋಡದೇ ಸಂಸ್ಕಾರ ಮಾಡಿದ್ದರು. ಹೀಗಾಗಿ, ಬೇರೆ ದಾರಿ ಕಾಣದೆ ಮುಸ್ಲಿಂ ಕುಟುಂಬದವರು ತಮ್ಮ ಕೈ ಸೇರಿದ ಶವವನ್ನು ಹುಗಿದಿದ್ದಾರೆ! ಈ ವಿಚಾರಕ್ಕೆ ಸಂಬಂಧಿಸಿ ತನಿಖೆಗೆ ಆದೇಶಿಸಲಾಗಿದೆ.

Comments are closed.