ರಾಷ್ಟ್ರೀಯ

ಮೊಬೈಲ್‌ ಫೋನ್‌ನಲ್ಲಿರುವ 89 ಆ್ಯಪ್‌ ಮತ್ತು ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳನ್ನು ಡಿಲೀಟ್‌ ಮಾಡುವಂತೆ ಸೈನಿಕರಿಗೆ ಕಟ್ಟುನಿಟ್ಟಿನ ಸೂಚನೆ

Pinterest LinkedIn Tumblr

ಹೊಸದಿಲ್ಲಿ: ಜುಲೈ 15ಕ್ಕೂ ಮೊದಲು ತಮ್ಮ ಮೊಬೈಲ್‌ ಫೋನ್‌ನಲ್ಲಿರುವ 89 ಆ್ಯಪ್‌ ಮತ್ತು ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳನ್ನು ಡಿಲೀಟ್‌ ಮಾಡುವಂತೆ ತನ್ನ 13 ಲಕ್ಷ ಸೈನಿಕರು ಮತ್ತು ಅಧಿಕಾರಿಗಳಿಗೆ ಭೂಸೇನೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಭದ್ರತೆಯ ಕಾರಣಕ್ಕೆ ಹಾಗೂ ಗೌಪ್ಯ ಮಾಹಿತಿಗಳ ಸೋರಿಕೆಯ ಅಪಾಯದ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದ್ದು, ಆದೇಶ ಪಾಲನೆ ಮಾಡದೇ ಇರುವವರು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. 89 ಆ್ಯಪ್‌ಗಳಲ್ಲಿ ಕೇಂದ್ರ ಸರಕಾರ ನಿಷೇಧಿಸಿದ ಚೀನಾಕ್ಕೆ ಸೇರಿದ 59 ಆ್ಯಪ್‌ಗಳೂ ಸೇರಿವೆ. ಜೊತೆಗೆ ಜನಪ್ರಿಯ ಆ್ಯಪ್‌ಗಳಾದ ಡೈಲಿ ಹಂಟ್‌, ಹಂಗಾಮ ಮೊದಲಾದವೂ ಸೇರಿವೆ.

“ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ಪಾಕಿಸ್ತಾನ ಮತ್ತು ಚೀನಾದ ಗುಪ್ತಚರ ಸಂಸ್ಥೆಗಳು ಗುರಿಯಾಗಿಸುತ್ತಿರುವುದು ಕಂಡು ಬಂದಿದೆ,” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ನವೆಂಬರ್‌ನಲ್ಲಿ ಸೇನೆಯು ಕಚೇರಿ ಕೆಲಸಗಳಿಗೆ ವಾಟ್ಸಾಪ್‌ ಬಳಸದಂತೆ ಸೂಚನೆ ನೀಡಿತ್ತು. ಜೊತೆಗೆ ಸೂಕ್ಷ್ಮ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ ಫೇಸ್‌ಬುಕ್‌ ಖಾತೆಯನ್ನು ಡಿಲೀಟ್‌ ಮಾಡುವಂತೆಯೂ ಹೇಳಿತ್ತು.
ದುಷ್ಟ ಚೀನಾಕ್ಕೆ ಆ್ಯಪ್‌ ಗುದ್ದು: ಡ್ರ್ಯಾಗನ್‌ ದರ್ಪಕ್ಕೆ ಭಾರತದ ಬಲವಾದ ಪೆಟ್ಟು!

ಇತ್ತೀಚಿನ ಎರಡು-ಮೂರು ವರ್ಷಗಳಲ್ಲಿ ಪಾಕಿಸ್ತಾನದ ಏಜೆಂಟರು ಮಹಿಳೆಯರಂತೆ ನಟಿಸಿ ಭಾರತೀಯ ಸೇನಾ ಸಿಬ್ಬಂದಿಯನ್ನು ಹನಿ ಟ್ರ್ಯಾಪ್‌ನಲ್ಲಿ ಬೀಳಿಸಿ ಗೌಪ್ಯ ಮಾಹಿತಿಯನ್ನು ಕಲೆ ಹಾಕಿದ ಅನೇಕ ಪ್ರಕರಣಗಳ ನಡೆದಿವೆ. 2018ರಲ್ಲಿ ನವದೆಹಲಿಯ ಐಎಎಫ್ ಕೇಂದ್ರ ಕಚೇರಿಯ ಗ್ರೂಪ್ ಕ್ಯಾಪ್ಟನ್ ಕೂಡ ಇದಕ್ಕೆ ಬಲಿಯಾಗಿದ್ದರು.

ದೇಶದ ಹಿತದೃಷ್ಟಿಯಿಂದ ಸೂಕ್ಷ್ಮ ಮಾಹಿತಿಯನ್ನು ರಕ್ಷಿಸುವ ಸಲುವಾಗಿ ಇದೀಗ ಸೇನೆ ಇಂಥಹದ್ದೊಂದು ಆದೇಶ ನೀಡಿದೆ. ಈಗಾಗಲೆ ನೌಕಾದಳ ತನ್ನ ಎಲ್ಲಾ ಸೈನಿಕರಿಗೂ ಫೇಸ್‌ಬುಕ್‌ ಬಳಕೆಗೆ ನಿರ್ಬಂಧ ಹೇರಿದೆ. ಜೊತೆಗೆ ಕಳೆದ ಡಿಸೆಂಬರ್‌ನಲ್ಲಿ ನೌಕಾನೆಲೆಗಳಿಗೆ ಮತ್ತು ಡಾಕ್‌ಯಾರ್ಡ್‌ಗಳಿಗೆ ಸ್ಮಾರ್ಟ್‌ಫೋನ್‌ಗಳನ್ನು ಕೊಂಡೊಯ್ಯದಂತೆಯೂ ಸೂಚನೆ ನೀಡಿತ್ತು.

ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿಗಳನ್ನು ನೀಡುತ್ತಿದ್ದ ಆರೋಪದಲ್ಲಿ ವೈಜಾಗ್‌ ಮತ್ತು ಕಾರವಾರದ ಸೇಯ್ಲರ್‌ ದರ್ಜೆಯ ಅಧಿಕಾರಿಗಳನ್ನು ಬಂಧಿಸಿದ ನಂತರ ಇಂಥಹದ್ದೊಂದ ಆದೇಶವನ್ನು ನೀಡಲಾಗಿತ್ತು.

ಇಲ್ಲಿಯವರೆಗೆ ಭೂಸೇನೆ ಸೈನಿಕರಿಗೆ ಫೇಸ್‌ಬುಕ್‌ ಬಳಕೆಗೆ ಅವಕಾಶ ನೀಡಿತ್ತು. ಆದರೆ ಸಮವಸ್ತ್ರದಲ್ಲಿರುವ ಫೋಟೋ, ಜೊತೆಗೆ ಸೇನಾಪಡೆಗಳಿರುವ ಜಾಗಗಳನ್ನು ಬಹಿರಂಗಪಡಿಸಬಾರದು ಎಂಬ ನಿರ್ಬಂಧಗಳನ್ನು ಹೇರಲಾಗಿತ್ತು. ಈ ಹಿಂದೆ ಯುದ್ಧ ನೌಕೆಗಳ ಜಾಗ, ಬೆಟಾಲಿಯನ್‌ಗಳಿರುವ ಸ್ಥಳ ಮೊದಲಾದ ಗೌಪ್ಯ ಮಾಹಿತಿಗಳನ್ನು ಪೋಸ್ಟ್‌ಗಳಲ್ಲಿ ಹಂಚಿಕೊಂಡಿದ್ದಕ್ಕೆ ಹಲವರ ಮೇಲೆ ಕ್ರಮಗಳನ್ನೂ ಕೈಗೊಳ್ಳಲಾಗಿತ್ತು.

Comments are closed.