ರಾಷ್ಟ್ರೀಯ

ಕೊರೋನಾ ಶತಮಾನದಲ್ಲಿಯೇ ಅತಿಕೆಟ್ಟ ಆರ್ಥಿಕ ಮತ್ತು ಆರೋಗ್ಯ ಬಿಕ್ಕಟ್ಟು ಸೃಷ್ಟಿಸಿದೆ: ಆರ್​ಬಿಐ ಗವರ್ನರ್

Pinterest LinkedIn Tumblr


ನವದೆಹಲಿ(ಜುಲೈ 11): ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಕಳೆದ 100 ವರ್ಷದಲ್ಲೇ ಕಂಡುಕೇಳರಿಯದಷ್ಟು ಅತಿದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಇಂದು ಅಭಿಪ್ರಾಯಪಟ್ಟಿದ್ಧಾರೆ. 7ನೇ ಎಸ್​ಬಿಐ ಬ್ಯಾಂಕಿಂಗ್ ಮತ್ತು ಆರ್ಥಿಕ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು ಭಾರತದ ಸದ್ಯ ಭವಿಷ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ವ್ಯಾಕುಲಗೊಂಡಿದ್ದಾರೆ.

“ಭಾರತದ ಆರ್ಥಿಕತೆಯ ಮಧ್ಯಮಾವಧಿಯಲ್ಲಿ ಅನಿಶ್ಚಿತ ಸ್ಥಿತಿ ತೋರುವಂತಿದೆ. ಎರಡು ತಿಂಗಳ ರಾಷ್ಟ್ರವ್ಯಾಪಿ ಲಾಕ್​ಡೌನ್ ನಂತರ ಅನ್​ಲಾಕ್ ಆದರೂ ಬೇಡಿಕೆ ಮತ್ತು ಸರಬರಾಜು ವ್ಯವಸ್ಥೆಗೆ ಆಗಿರುವ ಧಕ್ಕೆಯಿಂದಾಗಿ ಆರ್ಥಿಕತೆಯ ಸದ್ಯೋಭವಿಷ್ಯ ಆಶಾದಾಯಕವಾಗಿ ಕಾಣುತ್ತಿಲ್ಲ” ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಆದರೆ, ಮಧ್ಯಮಾವಧಿಯಲ್ಲಿ ಆರ್ಥಿಕ ಬೆಳವಣಿಗೆ ನಿರೀಕ್ಷಿತ ಪ್ರಮಾಣದಲ್ಲಿ ಇರುವುದಿಲ್ಲವಾದರೂ ಆರ್ಥಿಕತೆ ಸಹಜ ಸ್ಥಿತಿಗೆ ಮರಳುವ ಸೂಚನೆಯಂತೂ ಕಾಣಿಸುತ್ತಿದೆ. ಕೊರೋನಾ ವೈರಸ್ ಮಹಾಮಾತಿಯನ್ನು ನಿಯಂತ್ರಣಕ್ಕೆ ತಂದ ನಂತರ ಬಹಳ ಎಚ್ಚರಿಕೆಯಿಂದ ಹೆಜ್ಜೆಗಳನ್ನ ಇಡುವ ಅಗತ್ಯ ಇದೆ ಎಂದು ದಾಸ್ ಎಚ್ಚರಿಸಿದ್ದಾರೆ.

ಆರ್​ಬಿಐ ಕೈಗೊಂಡಿರುವ ಕ್ರಮಗಳು ಇಲ್ಲಿಯವರೆಗೆ ಪರಿಣಾಮಕಾರಿಯಾಗಿದ್ದಂತಿದೆ. ಆದರೆ, ಮುಂಬರುವ ದಿನಗಳಲ್ಲಿ ಬಹಳ ಯೋಚಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದವರು ತಿಳಿಸಿದ್ಧಾರೆ.

ಕೋವಿಡ್-19 ಸಾಂಕ್ರಾಮಿಕ ರೋಗವು ಈಗನ ವಿಶ್ವ ಶ್ರೇಣಿ, ಕಾರ್ಮಿಕ ಚಲನೆ ಮತ್ತು ಬಂಡವಾಳ ಚಲನೆಗೆ ಹಿನ್ನಡೆ ತಂದಿದೆ. ಆದರೆ, ನಮ್ಮ ಆರ್ಥಿಕ ಮತ್ತು ಹಣಕಾಸು ವ್ಯವಸ್ಥೆಯ ಗಟ್ಟಿತನಕ್ಕೆ ಸದ್ಯ ಅತಿದೊಡ್ಡ ಸವಾಲು ಹಾಕಿದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ಧಾರೆ.

ಭಾರತದ ಬ್ಯಾಂಕಿಂಗ್ ಮತ್ತು ಹಣಕಾಸು ವ್ಯವಸ್ಥೆ ಈ ಸವಾಲು ಎದುರಿಸಲು ಸಮರ್ಥವಾಗಿದೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಬ್ಯಾಂಕುಗಳು ತಮ್ಮ ಆಡಳಿತ ವ್ಯವಸ್ಥೆಯನ್ನ ಸುಧಾರಿಸಿಕೊಳ್ಳಬೇಕು. ಪರಿಸ್ಥಿತಿ ಅನುಕೂಲವಾಗಲೆಂದು ಕಾಯುವ ಬದಲು ಬ್ಯಾಂಕುಗಳು ಮುನ್ನೆಚ್ಚರಿಕೆಯಾಗಿ ಬಂಡವಾಳ ಹೆಚ್ಚಿಸಿಕೊಳ್ಳಬೇಕು ಎಂದು ಆರ್​ಬಿಐ ಗವರ್ನರ್ ಕಿವಿಮಾತು ಹೇಳಿದ್ದಾರೆ.ಇದನ್ನೂ ಓದಿ: ಆಗಸ್ಟ್​ನಿಂದ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಆರಂಭ ಸಾಧ್ಯತೆ

ಕೊರೋನಾ ಬಿಕ್ಕಟ್ಟಿನಿಂದ ಉಂಟಾದ ಆರ್ಥಿಕ ಹಿನ್ನಡೆ ಹಾಗೂ ಲಾಕ್​ಡೌನ್ ನಂತರ ಆರ್ಥಿಕತೆ ಕುಂಟುತ್ತಾ ಸಾಗಲಿರುವ ಸಾಧ್ಯತೆ ಇರುವುದರಿಂದ ಬ್ಯಾಂಕುಗಳಲ್ಲಿ ನಾನ್-ಪರ್ಫಾರ್ಮಿಂಗ್ ಅಸೆಟ್ಸ್ (ಕೆಟ್ಟ ಸಾಲ) ಪ್ರಮಾಣ ಹೆಚ್ಚಾಗಬಹುದು. ಬ್ಯಾಂಕುಗಳ ಬಂಡವಾಳ ಕ್ಷೀಣಿಸಬಹುದು. ಆದ್ದರಿಂದ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ವಲಯದ ಬ್ಯಾಂಕುಗಳಿಗೆ ಮತ್ತೆ ಬಂಡವಾಳ ತುಂಬಿಸುವುದು ಅತ್ಯಗತ್ಯವಾಗಿದೆ ಎಂದು ರಿಸರ್ವ್ ಬ್ಯಾಂಕ್ ಇಂಡಿಯಾ ಗವರ್ನರ್ ಅಭಿಪ್ರಾಯಪಟ್ಟಿದ್ದಾರೆ.

Comments are closed.