ರಾಷ್ಟ್ರೀಯ

ಸಚಿನ್ ಪೈಲಟ್ ಸೇರಿದಂತೆ 18 ಶಾಸಕರಿಗೆ ಅನರ್ಹತೆ ನೋಟಿಸ್ ನೀಡಿದ ಸ್ಪೀಕರ್

Pinterest LinkedIn Tumblr

ನವದೆಹಲಿ: ರಾಜಸ್ಥಾನ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಸ್ಪೀಕರ್ ಅಧಿಕಾರ ಮತ್ತೆ ಮುನ್ನೆಲೆಗೆ ಬಂದಿದೆ.

ಸಚಿನ್ ಪೈಲಟ್ ಹಾಗೂ ಇತರ 18 ಶಾಸಕರನ್ನು ಅನರ್ಹಗೊಳಿಸಲು ಆಡಳಿತರೂಢ ಕಾಂಗ್ರೆಸ್ ಪಕ್ಷ ಸ್ಪೀಕರ್ ಕೋರಿದ್ದು, ಬಂಡಾಯ ಶಾಸಕರು ಮೂರು ದಿನಗೊಳಗೆ ಪ್ರತಿಕ್ರಿಯೆ ನೀಡುವಂತೆ ಸ್ಪೀಕರ್ ನೋಟಿಸ್ ನೀಡಿದ್ದಾರೆ.

ಸಂವಿಧಾನದ 10ನೇ ವಿಧಿ ಅಡಿಯಲ್ಲಿ ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಸ್ಪೀಕರ್ ಅಧಿಕಾರ ಬಗ್ಗೆ ಸುಪ್ರೀಂಕೋರ್ಟ್ ಕೂಡಾ ವಿವಿಧ ನಾನಾ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

ರಾಜಸ್ಥಾನ ಆಸೆಂಬ್ಲಿ ಸ್ಪೀಕರ್ ಸಿ. ಪಿ. ಜೋಷಿ ನೀಡಿರುವ ಶೋ ಕಾಸ್ ನೋಟಿಸ್ ಗೆ ಸಂಬಂಧಿಸಿದ ವಿಚಾರದಲ್ಲಿ 2011ರಲ್ಲಿ ಕರ್ನಾಟಕ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸಚಿನ್ ಪೈಲಟ್ ಒಳಗೊಂಡಂತೆ 19 ಶಾಸಕರ ಬಲವನ್ನು ಹೆಚ್ಚಿಸುವ ಸಾಧ್ಯತೆ ಇದೆ.

2011ರಲ್ಲಿ 11 ಶಾಸಕರನ್ನು ಅನರ್ಹಗೊಳಿಸಿ ಆದೇಶಿಸಿದ ಸ್ಪೀಕರ್ ತೀರ್ಪನ್ನು ಸುಪ್ರೀಂ ಕೋರ್ಟ್ ಅಸಿಂಧುಗೊಳಿಸಿತ್ತು. ಯಡಿಯೂರಪ್ಪಗೆ ನಿಷ್ಠೆ ತೋರಲಿಲ್ಲವೆಂಬ ಒಂದೇ ಕಾರಣಕ್ಕೆ ಅವರನ್ನ ಅನರ್ಹತೆಗೊಳಿಸಿದ್ದು ಸ್ಪೀಕರ್ ಬೋಪಯ್ಯ ಅವರ ತಪ್ಪು ನಿರ್ಧಾರವಾಗಿದೆ ಎಂದು ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದ್ದರು. ಈಗ ಇದೇ ತೀರ್ಪನ್ನು ಆಧಾರವಾಗಿಟ್ಟುಕೊಂಡು ಸುಪ್ರೀಂ ಕೋರ್ಟ್ ತಮಗೆ ನ್ಯಾಯ ಕೊಡಬಹುದು ಎಂಬ ವಿಶ್ವಾಸದಲ್ಲಿ ರಾಜಸ್ಥಾನದ 19 ಶಾಸಕರಿದ್ದಾರೆ.

ರಾಜಸ್ಥಾನ ಸ್ಪೀಕರ್ ಪೈಲಟ್ ಮತ್ತು ಇತರ 18 ಶಾಸಕರಿಗೆ ನೋಟಿಸ್ ನೀಡಿರುವುದು ಸಂವಿಧಾನದ 10 ವಿಧಿಯ ವ್ಯಾಪ್ತಿಯನ್ನು ಮೀರಿದೆ.ಅವರು ಬಿಜೆಪಿ ಸೇರುತ್ತೇವೆ ಅಥವಾ ಬೆಂಬಲಿಸುತ್ತೇವೆ ಎಂದು ಹೇಳಿಕೆ ನೀಡಿಲ್ಲ ಎಂದು ಹಿರಿಯ ವಕೀಲ ಮತ್ತು ಸಂವಿಧಾನ ತಜ್ಞ ರಾಕೇಶ್ ದ್ವಿವೇದಿ ಹೇಳಿದ್ದಾರೆ.

ಮುಖ್ಯಮಂತ್ರಿ ವಿರುದ್ಧ ಪ್ರತಿಭಟನೆ ಅಥವಾ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವಂತೆ ಕಾಂಗ್ರೆಸ್ ಹೈಕಮಾಂಡ್ ಒತ್ತಾಯಿಸಿದ ಮಾತ್ರಕ್ಕೆ ಪಕ್ಷದಿಂದ ಹೊರ ಹೋಗುತ್ತೇವೆ ಎಂಬರ್ಥವಲ್ಲಾ ಎಂದು ಅವರು ಹೇಳಿದ್ದಾರೆ.

Comments are closed.