ನವದೆಹಲಿ: ದೇಶದಾದ್ಯಂತ ಸೋಂಕು ಪತ್ತೆ ಹೆಚ್ಚಳವಾದ ಬೆನ್ನಲ್ಲೇ ಸೋಂಕಿತರ ಸಂಖ್ಯೆಯಲ್ಲೂ ಭಾರೀ ಏರಿಕೆ ಕಂಡುಬರುತ್ತಿದ್ದು, ಶುಕ್ರವಾರ ದಾಖಲೆಯ 34,956 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 10,03,832ಕ್ಕೆ ತಲುಪಿದೆ.
ಇನ್ನು ನಿನ್ನೆ ಒಂದೇ ದಿನ 687 ಮಂದಿ ಕೊರೋನಾಗೆ ಬಲಿಯಾದರೊಂದಿಗೆ ಈ ವರೆಗೆ ಬಲಿಯಾದವರ ಸಂಖ್ಯೆ 25,602ಕ್ಕೆ ಮುಟ್ಟಿದೆ. ಮತ್ತೊಂದೆಡೆ ನಿನ್ನೆ ಒಂದೇ ದಿನ 22987 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯೊಂದಿದ್ದಾರೆ.
ಇದರೊಂದಿಗೆ ದೇಶದಲ್ಲಿ ಗುಣಮುಖರಾದವರ ಸಂಖ್ಯೆ 6,35,757ಕ್ಕೆ ಏರಿಕೆಯಾಗಿದ್ದು, ಇನ್ನೂ ದೇಶದಲ್ಲಿ 3,42,473 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.
2020ರ ಜ.30ರಂದು ಭಾರತದಲ್ಲಿ ಮೊದಲ ಸೋಂಕು ಪತ್ತೆಯಾಗಿದ್ದು, ಆದಾದ ಐದೂವರೆ ತಿಂಗಳಿನಲ್ಲಿ ದೇಶದಲ್ಲಿ ಸೋಂಕಿತರ ಸಂಖ್ಯೆ 10 ಲಕ್ಷದ ಗಡಿ ದಾಟಿದೆ.
ಮಹಾರಾಷ್ಟ್ರದಲ್ಲಿ ಗುರುವಾರ ಒಂದೇ ದಿನ ದಾಖಲೆಯ 8641 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ನಿನ್ನೆ ಒಂದೇ ದಿನ ಕೊರೋನಾಗೆ 266 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಕೊರೋನಾದಿಂದ ಸಾವನ್ನಪ್ಪಿದ್ದವರ ಸಂಖ್ಯೆ 11,194ಕ್ಕೆ ಏರಿಕೆಯಾದರೆ, ಸೋಂಕಿತರ ಸಂಖ್ಯೆ 2,84,281 ಅಂದರೆ, 3 ಲಕ್ಷದ ಸಮೀಪಕ್ಕೆ ದಾಪುಗಾಲು ಹಾಕುತ್ತಿದೆ.
ಉಳಿದಂತೆ ತಮಿಳುನಾಡಿನಲ್ಲೂ ಗುರುವಾರ ದಾಖಲೆ ಪ್ರಮಾಣದ 4549 ಕೊರೋನಾ ಪ್ರಕರಣಗಳು ದೃಢಪಟ್ಟಿದೆ. ಇನ್ನು ಕರ್ನಾಟಕದಲ್ಲಿ 4169, ಆಂಧ್ರಪ್ರದೇಶದಲ್ಲಿ 2593, ಉತ್ತರಪ್ರದೇಶ 2058, ಪಶ್ಚಿಮ ಬಂಗಾಳದಲ್ಲಿ 1690 ಗರಿಷ್ಠ ಪ್ರಮಾಣದ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದೇ ವೇಳೆ ಗುರುವಾರ ಒಂದೇ ದಿನ ಕೊರೋನಾ ಮಹಾಮಾರಿಗೆ ಮಹಾರಾಷ್ಟ್ರದಲ್ಲಿ 266, ಕರ್ನಾಟಕ 104, ತಮಿಳುನಾಡು 69, ದೆಹಲಿ 58 ಮತ್ತು ಆಂಧ್ರಪ್ರದೇಶ 40 ಮಂದಿ ಸಾವನ್ನಪ್ಪಿದ್ದಾರೆ.
ದೇಶಾದ್ಯಂತ 24 ಗಂಟೆಗಳಲ್ಲಿ 3,33,228 ಕೋವಿಡ್ ಪರೀಕ್ಷೆ
ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದೇಶದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವಂತೆಯೇ ಇತ್ತ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ 24 ಗಂಟೆಗಳಲ್ಲಿ ದೇಶಾದ್ಯಂತ 3,33,228 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ.
ಈ ಬಗ್ಗೆ ಐಸಿಎಂಆರ್ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 3,33,228 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದ್ದು, ಆ ಮೂಲಕ ದೇಶದಲ್ಲಿ ಈ ವರೆಗೂ ಅಂದರೆ ಜು.16ರ ವರೆಗೂ 1,30,72,718 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ.
Comments are closed.