ನವದೆಹಲಿ: ಕರೊನಾ ವೈರಸ್ನಿಂದ ಕಾಪಾಡಿಕೊಳ್ಳಲು ಶುಚಿತ್ವಕ್ಕೆ ಹೆಚ್ಚಿನ ಗಮನ ಕೊಡಲೇಬೇಕು. ಅದರಲ್ಲೂ ಆಗಾಗ ಕೈಗಳನ್ನು ಸ್ಯಾನಿಟೈಸರ್ನಿಂದ (ಸೋಂಕು ನಿವಾರಕ) ಶುಚಿಗೊಳಿಸಿಕೊಳ್ಳಬೇಕು ಎಮದು ವೈದ್ಯರೇ ಹೇಳುತ್ತಾರೆ. ಹೀಗಾಗಿ ಎಲ್ಲ ಮನೆಗಳಲ್ಲೂ ಈಗ ಸ್ಯಾನಿಟೈಸರ್ ಬಳಕೆ ಮಾಡಲಾಗುತ್ತಿದೆ.
ಆದರೆ, ಸೋಂಕು ನಿವಾರಕಗಳು ಸಾಮಾನ್ಯವಾಗಿ ಅಲ್ಕೋಹಾಲ್ ಆಧಾರಿತವಾಗಿರುತ್ತವೆ. ಹೀಗಾಗಿಯೇ ಧಾರ್ಮಿಕ ಮುಖಂಡರು ದೇಗುಲ, ಧಾರ್ಮಿಕ ಸ್ಥಳಗಳಲ್ಲಿ ಇದರ ಬಳಕೆಗೆ ವಿರೋಧಿಸಿದ್ದು ಬೇರೆ ಮಾತು.
ಈ ಸ್ಯಾನಿಟೈಸರ್ಗಳ ಬಳಕೆ ಕೂಡ ಅಪಾಯಕಾರಿಯಾಗಬಲ್ಲುದು ಎಂಬ ವಿಷಯವೀಗ ಕೊಂಚ ಆತಂಕಕ್ಕೆ ಕಾರಣವಾಗಿದೆ. ಅಮೆರಿಕ ಫುಡ್ ಆ್ಯಂಡ್ ಡ್ರಗ್ ಆ್ಯಡ್ಮಿನಿಸ್ಟ್ರೇಷನ್ (ಎಫ್ಡಿಎ) ವಿಭಾಗ ಇಂಥದ್ದೊಂದು ಎಚ್ಚರಿಕೆಯನ್ನು ನೀಡಿದೆ. ಜತೆಗೆ, ಯಾವುದನ್ನು ಬಳಸಬಾರದು ಎಂಬುದಕ್ಕೆ 75 ಉತ್ಪನ್ನಗಳ ವಿವರವನ್ನು ನೀಡಿದೆ.
ಎಫ್ಡಿಎ ಪ್ರಕಾರ ಸ್ಯಾನಿಟೈಸರ್ಗಳಲ್ಲಿ ಮೆಥನಾಲ್ ಇರಕೂಡದು. ಇದು ಚರ್ಮದ ಮೂಲಕ ದೇಹ ಸೇರಿದರೆ ವಿಷಕಾರಿಯಾಗಬಲ್ಲುದು. ನೇರವಾಗಿ ದೇಹಕ್ಕೆ ಸೇರಿದರೆ ಮಾರಣಾಂತಿಕವಾಗಿ ಪರಿಣಮಿಸಬಲ್ಲುದು ಎಂದು ಎಚ್ಚರಿಕೆ ನೀಡಿದೆ. ಮೆಥನಾಲ್ಅನ್ನು ವುಡ್ ಅಲ್ಕೋಹಾಲ್ ಎಂದೇ ಕರೆಯಲಾಗುತ್ತದೆ.
ಮೆಥನಾಲ್ ದೇಹಕ್ಕೆ ಸೇರಿದರೆ ಗಂಭೀರ ಅನಾರೋಗ್ಯ, ಅಂಧತ್ವ ಹಾಗೂ ಸಾವು ಸಂಭವಿಸಿದ್ದನ್ನು ಎಫ್ಡಿಎ ಉಲ್ಲೇಖಿಸಿದೆ. ಕೆಲ ಉತ್ಪನ್ನಗಳ ಮಾರಾಟಕ್ಕೆ ಎಫ್ಡಿಎ ನಿರ್ಬಂಧ ವಿಧಿಸಿದೆ. ಮಾರಾಟವನ್ನು ಹಿಂಪಡೆಯುವಂತೆಯೂ ಸೂಚಿಸಿದೆ. ಈ ಉತ್ಪನ್ನಗಳನ್ನು ಮೆಕ್ಸಿಕೋದಲ್ಲಿ ತಯಾರಿಸಿದ್ದು ಎನ್ನಲಾಗಿದೆ.
ಮೆಥನಾಲ್ ಅಂಶವಿರುವ ಸ್ಯಾನಿಟೈಸರ್ಗಳು ಬಳಕೆಗೆ ಅರ್ಹವಲ್ಲ. ಇದು ವಿಷಕಾರಿ ಗುಣಗಳನ್ನು ಹೊಂದಿದೆ. ಇಂಥ ಸ್ಯಾನಿಟೈಸರ್ಗಳನ್ನು ಬಳಸಿದ್ದರೆ, ಮೆಥನಾಲ್ ಅಂಶ ದೇಹ ಸೇರುವುದನ್ನು ನಿವಾರಿಸಿಕೊಳ್ಳಲು ಅಗತ್ಯ ಚಿಕಿತ್ಸೆ ಪಡೆಯಬೇಕು ಎಂದೂ ಹೇಳಿದೆ.
Comments are closed.