ಅಹಮದಾಬಾದ್: ಗುಜರಾತ್ನ ಥಾಲ್ತೇಜ್ ತಾಲೂಕ್ನಲ್ಲಿ ಮನೆಪಾಠ ಮಾಡಲು ಮನೆಗೆ ಬರುತ್ತಿದ್ದ ಯುವಕನೊಬ್ಬ ತನ್ನ 12 ವರ್ಷದ ಶಿಷ್ಯನ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಎಷ್ಟೇ ಔಷಧ ಕೊಡಿಸಿದರೂ ಬಾಲಕನಿಗೆ ಅತಿಸಾರ ಸಮಸ್ಯೆ ನಿಲ್ಲದಿದ್ದಾಗ ಈ ಸಂಗತಿ ಬಹಿರಂಗಗೊಂಡಿದೆ.
ಪಾರ್ಥ್ ಬ್ಯಾರೋಟ್ (21) ಅತ್ಯಾಚಾರ ಎಸಗಿದವನು. ತನ್ನ ಕೃತ್ಯವನ್ನು ಬಹಿರಂಗಪಡಿಸಿದರೆ, ನಿನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬಾಲಕನ್ನು ಬೆದರಿಸಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಗುಜರಾತ್ನ ಸೋಲಾ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್-19 ಪಿಡುಗಿನ ಹಿನ್ನೆಲೆಯಲ್ಲಿ ಶಾಲೆಗಳು ಅನಿರ್ದಿಷ್ಟಾವಧಿ ಮುಚ್ಚಲ್ಪಟ್ಟಿವೆ. ಈ ಹಿನ್ನೆಲೆಯಲ್ಲಿ ಪಾಲಕರು ಬಾಲಕನಿಗೆ ಮನೆ ಪಾಠದ ವ್ಯವಸ್ಥೆ ಮಾಡಿದ್ದರು. ಅದಕ್ಕಾಗಿ ಪಾರ್ಥ್ನನ್ನು ನೇಮಿಸಿಕೊಂಡಿದ್ದರು. ಮನೆಪಾಠ ಹೇಳಿಕೊಡುವ ನೆಪದಲ್ಲಿ ಶಿಷ್ಯನೊಂದಿಗೆ ಪ್ರತ್ಯೇಕ ಕೋಣೆ ಸೇರುತ್ತಿದ್ದ ಈತ ಆತನ ಮೇಲೆ ಅತ್ಯಾಚಾರ ಎಸಗುತ್ತಿದ್ದ.
ಕಳೆದೊಂದು ತಿಂಗಳಿಂದ ಬಾಲಕನಲ್ಲಿ ಅತಿಸಾರ ಸಮಸ್ಯೆ ಕಾಣಿಸಿಕೊಂಡಿತ್ತು. ಇದಕ್ಕಾಗಿ ಎಷ್ಟೇ ಔಷಧೋಪಚಾರ ಮಾಡಿದರೂ ಅತಿಸಾರ ಸಮಸ್ಯೆ ಶಮನವಾಗಿರಲಿಲ್ಲ. ಅನುಮಾನಗೊಂಡ ವೈದ್ಯರು ಗುದವನ್ನು ಪರೀಕ್ಷಿಸಿದಾಗ ಬಲವಂತವಾಗಿ ಜನನಾಂಗವನ್ನು ತೂರಿಸಿರುವ ಲಕ್ಷಣಗಳು ಕಾಣಿಸಿದ್ದವು.
ಈ ಬಗ್ಗೆ ಬಾಲಕನನ್ನು ವಿಚಾರಿಸಿದಾಗ ಆತ ಮನೆಪಾಠಕ್ಕೆ ಬರುವ ಪಾರ್ಥನತ್ತ ಬೆರಳು ಮಾಡಿದ್ದ. ಅಲ್ಲದೆ, ಈ ವಿಷಯವನ್ನು ಯಾರಿಗಾದರೂ ಹೇಳಿದರೆ, ನಿನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದ ಎಂದು ಹೇಳಿದ್ದ.
ಈ ಹಿನ್ನೆಲೆಯಲ್ಲಿ ಪೊಲೀಸರು ಪಾರ್ಥನ ವಿರುದ್ಧ ಅಸಹಜ ಲೈಂಗಿಕಕ್ರಿಯೆ (ಭಾರತೀಯ ದಂಡಸಂಹಿತೆ 377) ಆರೋಪದಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ದೂರು ದಾಖಲಾಗಿರುವುದು ಗೊತ್ತಾಗುತ್ತಲೇ ಪಾರ್ಥ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Comments are closed.