ರಾಷ್ಟ್ರೀಯ

ಸಚಿನ್ ಪೈಲಟ್ ಮನವೊಲಿಸಿದ ರಾಹುಲ್, ಪ್ರಿಯಾಂಕಾ

Pinterest LinkedIn Tumblr


ಜೈಪುರ (ಆಗಸ್ಟ್​ 11): ರಾಜಸ್ಥಾನದಲ್ಲಿ ಕಳೆದ ಕೆಲ ವಾರಗಳಿಂದ ನಡೆಯುತ್ತಿದ್ದ ರಾಜಕೀಯ ಹೈಡ್ರಾಮಾ ಅಂತ್ಯಕಂಡಿದೆ. ಸೋಮವಾರ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ನಂತರದಲ್ಲಿ ಬಂಡಾಯ ಶಾಸಕ ಸಚಿನ್ ಪೈಲಟ್ ಕಾಂಗ್ರೆಸ್​​ನಲ್ಲೇ ಉಳಿದುಕೊಂಡು, ಕಾಂಗ್ರೆಸ್​ಗಾಗಿಯೇ ಕೆಲಸ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

ಬಂಡಾಯ ಏಳುವ ಮೂಲಕ ಸರ್ಕಾರವನ್ನೇ ಬೀಳಿಸಲು ಸಚಿನ್‌ ಪೈಲಟ್‌ ಮುಂದಾಗಿದ್ದರು. ಅವರು ಬೇರೆ ಪಕ್ಷ ಕಟ್ಟಲಿದ್ದಾರೆ, ಬಿಜೆಪಿ ಸೇರಲಿದ್ದಾರೆ ಎಂಬಿತ್ಯಾದಿ ವಿಚಾರಗಳು ಚರ್ಚೆಗೆ ಬಂದಿದ್ದವು. ಸೋಮವಾರ ದಿಢೀರ್‌ ಬೆಳವಣಿಗೆಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಸಂಧಾನ ಮಾತುಕತೆ ಯಶಸ್ವಿಯಾಗಿದೆ.

ಸಭೆಯ ಬಗ್ಗೆ ಎಐಸಿಸಿ ಮುಖ್ಯ ಕಾರ್ಯದರ್ಶಿ ಕೆಸಿ ವೇಣುಗೋಪಾಲ್​ ರಾವ್​ ಮಾಹಿತಿ ನೀಡಿದ್ದಾರೆ. ಸಚಿನ್​ ಪೈಲಟ್​ ಪಕ್ಷ ತೊರೆಯುವುದಿಲ್ಲ. ಅವರು ಪಕ್ಷಕ್ಕಾಗಿಯೇ ಕಾರ್ಯ ನಿರ್ವಹಿಸಲಿದ್ದಾರೆ. ಅಲ್ಲದೆ, ಸಚಿನ್​ ಹಾಗೂ ಅತೃಪ್ತ ಶಾಸಕರ ಬೇಡಿಕೆ ಆಲಿಸಲು ಮೂರು ಸದಸ್ಯರ ಸಮಿತಿ ರಚನೆ ಮಾಡಲಾಗುತ್ತಿದೆ, ಎಂದು ತಿಳಿಸಿದ್ದಾರೆ.

ಸಚಿನ್​ ಪೈಲಟ್​ ಬಂಡಾಯ ಎದ್ದ ನಂತರ ಅವರಿಗೆ ನೀಡಿದ್ದ ಉಪಮುಖ್ಯಮಂತ್ರಿ ಸ್ಥಾನವನ್ನು ಕಿತ್ತುಕೊಳ್ಳಲಾಗಿತ್ತು. ಈ ಬಗ್ಗೆ ಸಚಿನ್​ ಪೈಲಟ್​ ಮಾತನಾಡಿದ್ದು, “ನಾನು ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಅವರು ನನಗೆ ನೀಡಿದ ಆಶ್ವಾಸನೆಗಳು ತೃಪ್ತಿ ನೀಡಿವೆ. ನಾನು ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ. ಉಪಮುಖ್ಯಮಂತ್ರಿ ಸ್ಥಾನವನ್ನು ಅವರು ನನಗೆ ಮರಳಿ ನೀಡುತ್ತಿದ್ದಾರೆ,” ಎಂದು ಹೇಳಿದ್ದಾರೆ. ಈ ಮೂಲಕ ಬಂಡಾಯ ಶಮನವಾಗಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಸಚಿನ್​ ಸಿಎಂ ಅಲ್ಲ:
ಕಾಂಗ್ರೆಸ್​ ಹಿರಿಯ ನಾಯಕರನ್ನು ಭೇಟಿಯಾದ ನಂತರದಲ್ಲಿ ಅಶೋಕ್​ ಗೆಹ್ಲೋಟ್​ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ, ಸಚಿನ್ ಪೈಲಟ್​ಗೆ ಮುಖ್ಯಮಂತ್ರಿ ಕೂರ್ಚಿ ನೀಡಲಾಗುತ್ತದೆ ಎನ್ನುವ ಮಾತು ಕೇಳಿ ಬಂದಿದೆ. ಆದರೆ, ಅಶೋಕ್​ ಗೆಹ್ಲೋಟ್​ರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಮಾತೇ ಇಲ್ಲ ಎಂದು ಪಕ್ಷದ ಮೂಲಗಳು ಸ್ಪಷ್ಟನೆ ನೀಡಿವೆ.ಬಿಜೆಪಿ ಸೇರಲು ಹವಣಿಸಿದ್ದ ಸಚಿನ್ ಪೈಲಟ್:

ಸಚಿನ್​ ಪೈಲಟ್​ 18 ಬೆಂಬಲಿಗರೊಂದಿಗೆ ಬಂಡಾಯ ಎದ್ದಿದ್ದರು. ತಮಗೆ ಸಿಎಂ ಸ್ಥಾನ ನೀಡಿ ಇಲ್ಲದಿದ್ದರೆ ಪಕ್ಷ ತೊರೆಯುತ್ತೇನೆ ಎಂದಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಸಚಿನ್​ ಡಿಸಿಎಂ ಸ್ಥಾನದಿಂದ ವಜಾ ಗೊಂಡಿದ್ದರು. ಶಾಸಕ ಸ್ಥಾನದಿಂದ ಇವರನ್ನು ಮಜಾ ಮಾಡುವ ಸ್ಪೀಕರ್​ ನಿರ್ಧಾರದ ಬಗ್ಗೆ ಇವರು ಸುಪ್ರೀಂ ಕೋರ್ಟ್​ ಮೆಟ್ಟಿಲನ್ನೂ ಏರಿದ್ದರು. ಪಕ್ಷ ತೊರೆದು ಅವರು ಬಿಜೆಪಿ ಸೇರಲಿದ್ದಾರೆ ಎನ್ನಲಾಗಿತ್ತು.

Comments are closed.