ರಾಷ್ಟ್ರೀಯ

ಬೀದಿಗೆ ಬಂದ ರಾಷ್ಟ್ರೀಯ ಕಾಂಗ್ರೆಸ್ ಕಲಹ; ರಾಹುಲ್ ಗಾಂಧಿಗೆ ಸಿಬಲ್ ತಿರುಗೇಟು

Pinterest LinkedIn Tumblr


ನವದೆಹಲಿ (ಆ. 24): ಕಾಂಗ್ರೆಸ್​ ಪಕ್ಷ ಸಂಕಷ್ಟದಲ್ಲಿರುವ ಈ ಪರಿಸ್ಥಿತಿಯಲ್ಲಿ ಸೋನಿಯಾ ಗಾಂಧಿಯ ನಾಯಕತ್ವದ ಬಗ್ಗೆ ಅಪಸ್ವರವೆತ್ತಿ ಪತ್ರ ಬರೆದಿರುವವರು ಬಿಜೆಪಿ ಏಜೆಂಟ್​ಗಳು ಎಂದು ಇಂದಿನ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, ಕಳೆದ 30 ವರ್ಷದಲ್ಲಿ ನಾನು ಒಂದೇ ಒಂದು ದಿನವೂ ಬಿಜೆಪಿ ಪರವಾಗಿ ಯಾವುದೇ ವಿಚಾರದಲ್ಲೂ ಹೇಳಿಕೆ ನೀಡಿಲ್ಲ. ಆದರೂ ಈ ರೀತಿಯ ಆರೋಪ ಕೇಳಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಮೂಲಕ ಕಾಂಗ್ರೆಸ್​ ಪಕ್ಷದೊಳಗಿನ ಅಸಮಾಧಾನ ಬಹಿರಂಗವಾಗಿ ಚರ್ಚೆಯಾಗುತ್ತಿದ್ದು, ಪಕ್ಷದ ಹಿರಿಯ ನಾಯಕರ ಬಗ್ಗೆ ರಾಹುಲ್ ಗಾಂಧಿ ಮಾಡಿರುವ ಆರೋಪ ತೀವ್ರ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್​ ಪಕ್ಷಕ್ಕೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಬೇಕು, ಅವರು ಗಾಂಧಿ ಕುಟುಂಬಕ್ಕೆ ಸೇರಿದವರಾಗಿರಬಾರದು ಎಂಬುದು ಕಾಂಗ್ರೆಸ್​ನ ಒಂದು ಬಣದ ಆಗ್ರಹವಾಗಿದೆ. ಇನ್ನೊಂದು ಬಣದವರು ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿಯೇ ಪಕ್ಷದ ಅಧ್ಯಕ್ಷರಾಗಬೇಕೆಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಇಂದಿನ ಸಿಡಬ್ಲ್ಯುಸಿ ಸಭೆಯಲ್ಲಿ ಚರ್ಚೆ ನಡೆಯುತ್ತಿದೆ.

ಈ ವೇಳೆ ಪಕ್ಷದೊಳಗಿನ ಭಿನ್ನಾಭಿಪ್ರಾಯದ ಬಗ್ಗೆ ಅಸಮಾಧಾನ ಹೊರಹಾಕಿರುವ ರಾಹುಲ್ ಗಾಂಧಿ, ಕಾಂಗ್ರೆಸ್​ನ ಶಾಸಕರು, ಮಾಜಿ ಸಿಎಂಗಳು, ಸಂಸದರು ಸೇರಿದಂತೆ 23 ಜನರು ಪಕ್ಷದಲ್ಲಿ ನಾಯಕತ್ವ ಬದಲಾವಣೆಗೆ ಆಗ್ರಹಿಸಿ ಪತ್ರ ಬರೆದಿರುವುದು ತಪ್ಪಲ್ಲ. ಆದರೆ, ಅದಕ್ಕೆ ಇದು ಸರಿಯಾದ ಸಮಯವಾಗಿರಲಿಲ್ಲ. ಸೋನಿಯಾ ಗಾಂಧಿ ಅವರಿಗೆ ಕಾಂಗ್ರೆಸ್​ ಅಧ್ಯಕ್ಷರಾಗಿ ಮುಂದುವರೆಯುವ ಇಚ್ಛೆಯಿರಲಿಲ್ಲ. ಆದರೂ, ಅನಿವಾರ್ಯತೆಯ ಕಾರಣದಿಂದ ಅವರು ಆ ಸ್ಥಾನವನ್ನು ನಿಭಾಯಿಸುತ್ತಿದ್ದಾರೆ ಎಂಬುದು ಪಕ್ಷದ ಎಲ್ಲ ನಾಯಕರಿಗೂ ಗೊತ್ತಿದೆ. ಆದರೂ ಈ ರೀತಿಯ ವರ್ತನೆ ತೋರಿರುವುದು ಸರಿಯಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಸೋನಿಯಾ ಗಾಂಧಿ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದಾಗ ಪಕ್ಷದ ನಾಯಕರು ಈ ರೀತಿ ಅವರ ನಾಯಕತ್ವದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಪತ್ರ ಬರೆದಿರುವುದು ಸರಿಯೇ? ನಿಮ್ಮ ಅಸಮಾಧಾನ ಹೊರಹಾಕಲು ಇದು ಸರಿಯಾದ ಸಮಯವೇ? ಎಂದು ರಾಹುಲ್ ಪ್ರಶ್ನೆ ಮಾಡಿದ್ದಾರೆ. ಹಾಗೇ, ಪಕ್ಷದಲ್ಲಿ ನಾಯಕತ್ವ ಸೇರಿದಂತೆ ಎಲ್ಲ ರೀತಿಯಲ್ಲೂ ಬದಲಾವಣೆ ತರಬೇಕೆಂದು ಆಗ್ರಹಿಸಿ ಪತ್ರ ಬರೆದಿರುವವರು ಬಿಜೆಪಿ ಸಹಾಯ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಇದಕ್ಕೆ ಟ್ವಿಟ್ಟರ್ ಮೂಲಕ ಬೇಸರ ವ್ಯಕ್ತಪಡಿಸಿರುವ ಆ 23 ನಾಯಕರಲ್ಲಿ ಒಬ್ಬರಾದ ಕಪಿಲ್ ಸಿಬಲ್, ರಾಹುಲ್ ಗಾಂಧಿ ನಾವು ಬಿಜೆಪಿಯೊಂದಿಗೆ ಕೈಜೋಡಿಸಿ, ಪಕ್ಷದ ವಿರುದ್ಧ ತಂತ್ರ ರೂಪಿಸಿದ್ದೇವೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಪರವಾಗಿ ರಾಜಸ್ಥಾನ ಹೈಕೋರ್ಟ್​ನಲ್ಲಿ ವಾದ ಮಂಡಿಸಿ ಜಯ ಗಳಿಸಿದ್ದೇನೆ. ಮಣಿಪುರದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್​ ಪರವಾಗಿ ವಾದ ಮಂಡಿಸಿದ್ದೆ. ಕಳೆದ 30 ವರ್ಷದ ರಾಜಕೀಯದಲ್ಲಿ ಎಂದಿಗೂ ಬಿಜೆಪಿ ಪರವಾಗಿ ಹೇಳಿಕೆ ನೀಡಿಲ್ಲ. ಆದರೂ ನಾವು ಬಿಜೆಪಿ ಜೊತೆ ಕೈಜೋಡಿಸಿದ್ದೇವೆ! ಎಂದು ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದಾರೆ.

Comments are closed.