ರಾಷ್ಟ್ರೀಯ

ಅಧ್ಯಕ್ಷ ಸ್ಥಾನ ಆಯ್ಕೆಯವರೆಗೂ ಸೋನಿಯಾರೇ ಹಂಗಾಮಿಯಾಗಿ ಮುಂದುವರಿಕೆ ಸಾಧ್ಯತೆ

Pinterest LinkedIn Tumblr


ನವದೆಹಲಿ(ಆ. 24): ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರವಾಗಿ ಇಂದು ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಅಂತಿಮ ತೀರ್ಮಾನ ಆಗುವುದು ಅನುಮಾನ. ಸೋನಿಯಾ ಗಾಂಧಿ ಅವರೇ ಹಂಗಾಮಿ ಅಧ್ಯಕ್ಷೆಯಾಗಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

“ಅಧ್ಯಕ್ಷ ಸ್ಥಾನ ಆಯ್ಕೆಗೆ ಸಮಯ ಬೇಕು. ಸಿಡಬ್ಲ್ಯೂಸಿ ಸಭೆಯಲ್ಲಿ ತತ್​ಕ್ಷಣಕ್ಕೆ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಹೊಸ ಅಧ್ಯಕ್ಷರ ಆಯ್ಕೆಯವರೆಗೂ ನೀವೇ ಮುಂದುವರಿಯಬೇಕೆಂದು ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡಿದ್ದೇವೆ. ಅವರು ಇನ್ನೂ ಕೆಲ ತಿಂಗಳವರೆಗೆ ಹಂಗಾಮಿ ಅಧ್ಯಕ್ಷೆಯಾಗಿರಲಿದ್ದಾರೆ” ಎಂದು ಮೂಲಗಳು ಹೇಳಿವೆ.

ಇಂದು ನಡೆದ ಸಿಡಬ್ಲ್ಯೂಸಿ ಸಭೆ ಹಲವು ನಾಟಕೀಯ ಪ್ರಸಂಗಗಳಿಗೆ ಸಾಕ್ಷಿಯಾಯಿತು. ಕಾಂಗ್ರೆಸ್ ನಾಯಕತ್ವದಲ್ಲಿ ಬದಲಾವಣೆಯಾಗುವುದು ಅಗತ್ಯ ಇದೆ ಎಂದು ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್ ಸೇರಿದಂತೆ 23 ಹಿರಿಯ ಕಾಂಗ್ರೆಸ್ಸಿಗರು ಸೋನಿಯಾ ಗಾಂಧಿ ಪತ್ರ ಬರೆದ ವಿಚಾರ ಈ ಸಭೆಯಲ್ಲಿ ಬಹಳಷ್ಟು ಚರ್ಚೆಯಾಗಿದೆ. ಪತ್ರ ಬರೆದವರು ಬಿಜೆಪಿ ಜೊತೆ ಶಾಮೀಲಾಗಿದ್ಧಾರೆ ಎಂದು ರಾಹುಲ್ ಗಾಂಧಿ ಹೇಳಿದ್ಧಾರೆಂಬ ‘ಸುದ್ದಿ’ಗೆ ಅಸಮಾಧಾನಿತರು ಖಾರವಾದ ಪ್ರತಿಕ್ರಿಯೆ ನೀಡಿದರು. ರಾಹುಲ್ ಆ ರೀತಿ ಹೇಳಿಲ್ಲವೆನ್ನುತ್ತಿದ್ದಂತೆಯೇ ಈ ನಾಯಕರು ತಮ್ಮ ಹೇಳಿಕೆಯನ್ನು ಹಿಂಪಡೆದದ್ದೂ ಆಯಿತು.

“ಪಕ್ಷದ ನಾಯಕತ್ವ ವಿಚಾರದಲ್ಲಿ ಸೋನಿಯಾ ಗಾಂಧಿಗೆ ಪತ್ರ ಬರೆದವರ ವಿರುದ್ಧ ಪಕ್ಷದ ಸಂವಿಧಾನದ ಪ್ರಕಾರ ಕ್ರಮ ತೆಗೆದುಕೊಳ್ಳಲು ಸಾಧ್ಯವಿದೆ. ಗುಲಾಂ ನಬಿ ಆಜಾದ್, ಆನಂದ್ ಶರ್ಮಾ ಅವರು ತಮ್ಮ ಇತಿಮಿತಿಯಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದೇವೆಂದು ಹೇಳಿದ್ದಾರೆ. ಆದರೂ ಇದು ಶಿಸ್ತಿನ ಉಲ್ಲಂಘನೆ ಎಂದು ಯಾರಿಗಾದರೂ ಅನಿಸಿದರೆ ಕ್ರಮ ತೆಗೆದುಕೊಳ್ಳಬಹುದು” ಎಂದು ಕಾಂಗ್ರೆಸ್ ನಾಯಕಿ ಅಂಬಿಕಾ ಸೋನಿ ಸಿಬ್ಲ್ಯೂಸಿ ಸಭೆಯಲ್ಲಿ ಹೇಳಿದ್ದಾರೆ.

“ಪಕ್ಷದ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಕೆಲ ಅಭಿಪ್ರಾಯಗಳನ್ನ ವ್ಯಕ್ತಪಡಿಸಿ ಪತ್ರ ಬರೆಯಲಾಗಿತ್ತು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನಾಯಕತ್ವದ ಬಗ್ಗೆ ಸಂಪೂರ್ಣ ವಿಶ್ವಾಸ ಇದೆ” ಎಂದು ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದ ಕಾಂಗ್ರೆಸ್ ನಾಯಕರು ಕಾರ್ಯಕಾರಿಣಿ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಮುಂದಿನ ಎಐಸಿಸಿ ಅಧಿವೇಶನದಲ್ಲಿ ಕಾಂಗ್ರೆಸ್ ಅಧ್ಯಕ್ಷರನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಅಲ್ಲಿಯವರೆಗೂ ಸೋಣಿಯಾ ಅವರೇ ಹಂಗಾಮಿಯಾಗಿ ಮುಂದುವರಿಯಲಿದ್ದಾರೆ ಎನ್ನಲಾಗಿದೆ. ಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಕಾಂಗ್ರೆಸ್ ದೊಡ್ಡ ಕುಟುಂಬವಿದ್ದಂತೆ. ತನಗೆ ಯಾರ ವಿರುದ್ಧವೂ ದ್ವೇಷ ಇಲ್ಲ. ಆದರೆ, ಪಕ್ಷದ ವೇದಿಕೆಯಲ್ಲಿ ಮಾತ್ರ ಅಭಿಪ್ರಾಯ ವ್ಯಕ್ತಪಡಿಸಿ ಎಂದು ಹಿರಿಯ ನಾಯಕರಿಗೆ ಸಲಹೆ ನೀಡಿದ್ದಾರೆ.ಇದೇ ವೇಳೆ, ಕಾಂಗ್ರೆಸ್ ಪಕ್ಷ ದೇಶದ ಹಿತಾಸಕ್ತಿಗೋಸ್ಕರ ತನ್ನೊಳಗಿನ ಭಿನ್ನಾಭಿಪ್ರಾಯಗಳನ್ನ ಕೊನೆಗಾಣಿಸಬೇಕು ಎಂದು ಸಿಪಿಐ ನಾಯಕ ಡಿ ರಾಜಾ ಹೇಳಿದ್ದಾರೆ. “ಇದು ಅವರ ಆಂತರಿಕ ವಿಚಾರ. ಆದರೆ, ಬಿಜೆಪಿ, ಆರೆಸ್ಸೆಸ್​ನಂಥ ವಿಚ್ಛಿದ್ರಕ ಶಕ್ತಿಗಳನ್ನ ದೂರವಿಡಲು ಕಾಂಗ್ರೆಸ್ ಮಗ್ನವಾಗಬೇಕಿದೆ” ಎಂದು ಕಮ್ಯೂನಿಸ್ಟ್ ನಾಯಕ ತಿಳಿಸಿದ್ದಾರೆ.

Comments are closed.