ಪಾಟ್ನಾ: ಈ ವ್ಯಕ್ತಿ ಅಂತಿಥ ವ್ಯಕ್ತಿಯಲ್ಲ….ಈತನ ಸಾಹಸಗಥೆ ಕೂಡ ವಿಭಿನ್ನ…. ಬಿಹಾರದ ದಶರಥ ಮಾಂಝಿ 22 ವರ್ಷ ಕಾಲ ಸತತವಾಗಿ ಗುದ್ದಲಿ, ಪಿಕಾಸಿ ಹಿಡಿದು ಬೆಟ್ಟವನ್ನೇ ಕಡಿದು ರಸ್ತೆ ಮಾಡಿದ್ದ ಸಾಹಸದಂತೆ ಈತನು ಮಾಡಿದ ಕಾರ್ಯ ದೇಶದ ಜನ ತನ್ನತ್ತ ನೋಡುವಂತೆ ಮಾಡಿದ್ದಾನೆ.
ಗಯಾ ಜಿಲ್ಲೆಯ ಲೋಂಗಿ ಭುಯನ್ ಏಕಾಂಗಿಯಾಗಿ ಕೆಲಸ ಮಾಡಿ ತನ್ನೂರಿಗೆ ಕಾಲುವೆ ನಿರ್ಮಿಸಿದ್ದಾರೆ. 30 ವರ್ಷ ಕಾಲ ಒಬ್ಬರೇ ಕೆಲಸ ಮಾಡಿದ ಅವರು ತೋಡಿದ ಕಾಲುವೆ ಬರೋಬ್ಬರಿ 3 ಕಿಮೀ ಉದ್ದವಿದೆ. ಗಯಾದಿಂದ 80 ಕಿಮೀ ದೂರದಲ್ಲಿರುವ ಕೋತಿಲಾವ ಎಂಬ ಗ್ರಾಮದವರು ಈ ಲೋಂಗಿ ಭುಯನ್.
ಇವರು ಬರೋಬ್ಬರಿ 30 ವರ್ಷಗಳಿಂದ ತನ್ನ ಗ್ರಾಮದ ಜಮೀನಿಗಳಿಗೆ ನೆರವಾಗಲು ಕಾಲುವೆ ನಿರ್ಮಿಸಿದ್ದಾರೆ. ಗಯಾದ ಲಥುವಾ ಏರಿಯಾದಲ್ಲಿ ಬರುವ ಕೊಥಿಲವಾ ಗ್ರಾಮ ನಿವಾಸಿಯಾಗಿರುವ ಲೌಂಗಿ, ಗ್ರಾಮದ ಜನ ನೀರಿನ ಅಭಾವ ಎದುರಿಸುತ್ತಿದ್ದರು. ಇದನ್ನು ತಪ್ಪಿಸಲೆಂದು ಸಮೀಪದ ಬೆಟ್ಟದ ಇಳಿಜಾರಿಗೆ ಅನುಗುಣವಾಗಿ ಕಾಲುವೆ ಮಾಡಿ ಮಳೆ ನೀರು ಹರಿದು ಕೆರೆಗೆ ಸೇರುವಂತೆ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಈ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಲೌಂಗಿ, ಈ ಕಾಲುವೆಯನ್ನು ಅಗೆಯಲು ನನಗೆ ಬರೋಬ್ಬರಿ 30 ವರ್ಷಗಳು ಬೇಕಾಯಿತು. ಈ ಕಾಲುವೆ ನೀರು ಹಳ್ಳಿಯ ಕೊಳಕ್ಕೆ ಸೇರಿ ಅಲ್ಲಿ ಶೇಖರಣೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಕಳೆದ 30 ವರ್ಷಗಳಿಂದ ನಾನು ನನ್ನ ದನಗಳನ್ನು ಮೇಯಲು ಕರೆದುಕೊಂಡು ಹೋಗುತ್ತಿದ್ದೆ. ಹೀಗೆ ಹೋದವನು ದಿನಾ ಸ್ವಲ್ಪ ಸ್ವಲ್ಪ ಕಾಲುವೆಯನ್ನು ಅಗೆಯುತ್ತಿದ್ದೆ. ಈ ವೇಳೆ ನನಗೆ ಯಾರೂ ಸಹಾಯ ಮಾಡಲಿಲ್ಲ. ಗ್ರಾಮದ ಜನ ತಮ್ಮ ಜೀವನೋಪಾಯಕ್ಕಾಗಿ ಹಳ್ಳಿ ತೊರೆದು ನಗರದ ಕಡೆ ಮುಖ ಮಾಡುತ್ತಿದ್ದಾರೆ. ಆದರೆ ನಾನು ಆ ರೀತಿ ಮಾಡದೇ ಹಳ್ಳಿಯಲ್ಲೇ ಉಳಿದುಕೊಳ್ಳಲು ನಿರ್ಧರಿಸಿರುವುದಾಗಿ ಲೌಂಗಿ ಹೇಳಿದ್ದಾರೆ.
ಕೋತಿಲ್ವಾ ಗ್ರಾಮವು ಗಯಾ ಜಿಲ್ಲೆಯಿಂದ 80 ಕಿ.ಮೀ ದೂರದಲ್ಲಿರುವ ದಟ್ಟವಾದ ಕಾಡು ಹಾಗೂ ಪರ್ವತಗಳಿಂದ ಆವೃತವಾಗಿದೆ. ಗಯಾದಲ್ಲಿನ ಜನರ ಜೀವನೋಪಾಯದ ಮುಖ್ಯ ಸಾಧನವೆಂದರೆ ಕೃಷಿ ಮತ್ತು ಪಶುಸಂಗೋಪನೆ ಆಗಿದೆ. ಮಳೆಗಾಲದಲ್ಲಿ ಪರ್ವತಗಳಿಂದ ಬೀಳುವ ನೀರು ನದಿಗೆ ಹರಿಯುತ್ತಿತ್ತು. ಇದು ಲೌಂಗಿ ಅವರನ್ನು ಸಾಕಷ್ಟು ಕಾಡುತ್ತಿದ್ದು, ಹೀಗಾಗಿ ಅವರು ಕಾಲುವೆ ತೋಡಲು ನಿರ್ಧಾರ ಮಾಡಿದರು.
ಒಟ್ಟಿನಲ್ಲಿ ಲೌಂಗಿ ಮಾಡಿರುವ ಈ ಘನ ಕಾರ್ಯ ಇಂದು ಅನೇಕ ಪ್ರಾಣಿಗಳಿಗೆ ಸಹಾಯವಾಗಿದೆ. ಅಲ್ಲದೆ ಹೊಲಗಳಿಗೂ ಪ್ರಯೋಜನವಾಗಿದೆ. ವಿಶೇಷ ಅಂದರೆ ಲೌಂಗಿ ತನ್ನ ಸ್ವಂತ ಲಾಭಕ್ಕಾಗಿ ಕಾಲುವೆ ನಿರ್ಮಿಸಿಲ್ಲ. ಬದಲಾಗಿ ಇಡೀ ಗ್ರಾಮಕ್ಕಾಗಿ ಈ ಕೆಲಸ ಮಾಡಿದ್ದು, ಪ್ರಸ್ತುತ ಲೌಂಗಿ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Comments are closed.