ಭಾರತ ಚಿತ್ರರಂಗ ಕಂಡ ಮಹಾನ್ ಗಾಯಕ, ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಹಿರಿಯ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ(74) ಇನ್ನಿಲ್ಲ.
ಕೊರೋನಾ ಸೋಂಕಿನಿಂದಾಗಿ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮಧ್ಯಾಹ್ನ 1.04ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ಮಗ ಚರಣ್ ತಿಳಿಸಿದ್ದಾರೆ.
ಹಲವು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಸ್ಪಿಬಿ ಇಂದು ಬಾರದ ಲೋಕಕ್ಕೆ ತೆರಳಿದ್ದಾರೆ.
ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಆಗಸ್ಟ್ 5ರಂದು ಎಂಜಿಎಂ ಹೆಲ್ತ್ ಕೇರ್ ಆಸ್ಪತ್ರೆಗೆ ದಾಖಲಾಗಿದ್ದರು. ಆಗಸ್ಟ್ 13ರ ತಡರಾತ್ರಿಯಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ತಜ್ಞ ವೈದ್ಯರ ತಂಡದಿಂದ ಆರೈಕೆ ಮಾಡಲಾಗುತ್ತಿತ್ತು. ಆಗಸ್ಟ್ 24ರಂದು ಕೊರೊನಾ ವರದಿ ನೆಗೆಟಿವ್ ಬಂದಿತ್ತು.
ಆಗಸ್ಟ್ 5ರಂದು ಶೀತ ಮತ್ತು ಜ್ವರ ಕಾಣಿಸಿಕೊಂಡು ಉಸಿರಾಟಕ್ಕೆ ತೊಂದರೆಯಾಗಿದ್ದರಿಂದ ಎಸ್ಪಿಬಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯಕೀಯ ಪರೀಕ್ಷೆಯಿಂದ ಅವರಿಗೆ ಕೋವಿಡ್–19 ಸೋಂಕಿನ ಲಕ್ಷಣಗಳಿರುವುದು ದೃಢಪಟ್ಟಿತ್ತು. ಮನೆಯಲ್ಲಿಯೇ ಕ್ವಾರಂಟೈನ್ ಆಗುವಂತೆ ವೈದ್ಯರು ಸೂಚಿಸಿದ್ದರು. ಆದರೆ, ಕುಟುಂಬದ ಸದಸ್ಯರ ಸಲಹೆ ಮೇರೆಗೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು.
ಆ ಬಳಿಕದಿಂದ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಮೂಲಕವೇ ಅವರಿಗೆ ಚಿಕಿತ್ಸೆ ನಿಡಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಮೃತ ಅಂತ್ಯಕ್ರಿಯೆ ಚೆನ್ನೈನ ಫಾರ್ಮ್ ಹೌಸ್ ನಲ್ಲಿ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಜುಲೈನಲ್ಲಿ ಬಾಲಸುಬ್ರಹ್ಮಣ್ಯಂ ಅವರು ಕೊರೊನಾ ವಿರುದ್ಧ ಜಾಗೃತಿ ಮೂಡಿಸಲು ಸಾಹಿತಿ ವೈರಮುತ್ತು ರಚಿಸಿದ್ದ ಹಾಡಿಗೆ ಧ್ವನಿ ನೀಡಿದ್ದರು. ಇವರ ಕಲಾ ಸೇವೆಗೆ ಭಾರತ ಸರ್ಕಾರ 2011ರಲ್ಲಿ ಪದ್ಮಶ್ರೀ, 2011ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿತ್ತು.
1946ರ ಜೂನ್ 4 ರಂದು ಜನಿಸಿದ್ದ ಎಸ್ಪಿಬಿ ಕನ್ನಡ, ತಮಿಳು, ತೆಲುಗು, ಹಿಂದಿ, ಮಲೆಯಾಳಂ ಸೇರಿದಂತೆ ಒಟ್ಟು 16 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡನ್ನು ಹಾಡಿದ್ದಾರೆ.
ಕಳೆದ 50 ವರ್ಷಗಳಿಂದ ಅನೇಕ ಭಾಷೆಗಳಲ್ಲಿ ಹಾಡುವ ಮೂಲಕ ಹಾಗೂ ಕೆಲವು ಸಿನಿಮಾಗಳಲ್ಲಿ ನಟಿಸುತ್ತಾ ರಂಜಿಸಿದ್ದಾರೆ ಖ್ಯಾತ ಗಾಯಕ ಬಾಲಸುಬ್ರಹ್ಮಣ್ಯಂ. 16 ಭಾಷೆಗಳಲ್ಲಿ ಹಾಡುಗಳನ್ನು ಹಾಡಿರುವ ಬಾಲಸುಬ್ರಹ್ಮಣ್ಯಂ ಅವರ ಜನನವಾಗಿದ್ದು 1946ರ ಜೂನ್ 4 ರಂದು ಆಂಧ್ರಪ್ರದೇಶದ ಚಿತ್ತೂರಿನ ಕೊನೇಟಮ್ಮಪೇಟಾದಲ್ಲಿ.
ಹರಿಕಥೆ ಹೇಳುತ್ತಿದ್ದ ಇವರ ತಂದೆ ಎಸ್.ಪಿ.ಸಾಂಬಮೂರ್ತಿ ಅವರೇ ಇವರಿಗೆ ಪ್ರೇರಣೆಯಾಗಿದ್ದರಂತೆ. ಹಾಡುವುದನ್ನು, ಹಾರ್ಮೋನಿಯಂ ಹಾಗೂ ಕೊಳಲುನ್ನು ತಮ್ಮಷ್ಟಕ್ಕೆ ತಾವೇ ನುಡಿಸುತ್ತಾ ಸಂಗೀತ ಲೋಕಕ್ಕೆ ಕಾಲಿಟ್ಟವರು ಎಸ್ಪಿಬಿ. ನಂತರದಲ್ಲಿ ವಿದ್ಯಾರ್ಥಿಯಾಗಿ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿದರು.
ಆಂಧ್ರದಲ್ಲಿ ಹುಟ್ಟಿ ಬೆಳೆದರೂ ಅವರು ಹಾಡಿದ ಎರಡನೇ ಹಾಡು ಕನ್ನಡದ್ದು ಎಂದು ಆಗಾಗ ಹೆಮ್ಮೆಯಿಂದ ಹೇಳುತ್ತಿದ್ದರು ಎಸ್ಪಿಬಿ. ಕನ್ನಡದಲ್ಲಿ ವಿಷ್ಣುವರ್ಧನ್, ಶ್ರೀನಾಥ್, ಅನಂತ್ನಾಗ್, ಶಂಕರ್ ನಾಗ್, ತಮಿಳು ಹಾಗೂ ತೆಲುಗಿನಲ್ಲಿ ಕಮಲ್ ಹಾಸನ್, ರಜಿನಿಕಾಂತ್, ಚಿರಂಜೀವಿ, ಎಂಜಿಆರ್, ಶಿವಾಜಿ ಗಣೇಶನ್, ಅಕ್ಕಿನೇನಿ ನಾಗೇಶ್ವರರಾವ್ ಹೀಗೆ ಹಲವಾರು ಸ್ಟಾರ್ ನಟರ ಸಿನಿಮಾಗಳಲ್ಲಿ ಹಿಟ್ ಹಾಡುಗಳನ್ನು ಹಾಡಿದ್ದಾರೆ.
ಹಿಂದಿಯಲ್ಲಿ ಏಕ್ ದೂಜೆ ಕೆ ಲಿಯೆ ಸಿನಿಮಾದಲ್ಲಿ ಎಸ್ಪಿಬಿ ಹಾಡಿದ ಹಾಡಿಗಳಿಗೆ ಕೇಳುಗರು ಫಿದಾ ಆಗಿದ್ದರು. ಆಗಲೇ ಹಿಂದಿ ಚಿತ್ರರಂಗದಲ್ಲೂ ತಮ್ಮದೇ ಆದ ಸ್ಥಾನ ಮಾಡಿಕೊಳ್ಳಲು ಆರಂಭಿಸಿದ್ದರು. ನಂತರದಲ್ಲಿ ಸಲ್ಮಾನ್ ಖಾನ್ ಅವರ ಸಾಕಷ್ಟು ಚಿತ್ರಗಳಲ್ಲಿ ಅಂದರೆ, ಸಾಜನ್, ಮೈ ನೆ ಪ್ಯಾರ್ ಕಿಯಾ, ಲವ್, ಹಮ್ ಆಪ್ ಕೆ ಹೈ ಕೌನ್ಮುಂತಾದ ಚಿತ್ರಗಳಲ್ಲಿ ಹಾಡಿದ್ದಾರೆ.
ಅಭಿನಯದ ವಿಷಯಕ್ಕೆ ಬಂದರೆ, ಬಾಲಸುಬ್ರಹ್ಮಣ್ಯಂ ಅವರು ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲೂ ತಮ್ಮದೇ ಆದ ಸ್ಥಾನ ಪಡೆದುಕೊಂಡಿದ್ದಾರೆ. ಹಲವಾರು ಧಾರವಾಹಿಗಳು ಹಾಗೂ ಕನ್ನಡ. ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಮೊದಮೊದಲು ಅತಿಥಿ ಪಾತ್ರಗಳಲ್ಲಿ ನಟಿಸುತ್ತಿದ್ದವರು ನಂತರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಕೊಳ್ಳಲು ಆರಂಭಿಸಿದರು. ಕನ್ನಡದಲ್ಲಿ ಬಾಳೊಂದು ಚದುರಂಗ, ತಿರುಗು ಬಾಣ, ಮುದ್ದಿನ ಮಾವ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕಡೆಯದಾಗಿ 2018ರಲ್ಲಿ ತೆರೆಕಂಡ ದೇವ್ದಾಸ್ ತೆಲುಗು ಚಿತ್ರದಲ್ಲಿ ಅಭಿನಯಿದ್ದಾರೆ.
ಸಂಗೀತ ನಿರ್ದೇಶಕರಾಗಿ, ಹಲವಾರು ನಾಯಕರಿಗೆ ಮಾತುಗಾರರಾಗಿ, ನಟರಾಗಿ, ನಿರ್ಮಾಪಕರಾಗಿ ಕೂಡಾ ಬಾಲು ಚಿತ್ರರಂಗದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಹಾಸ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಹ ಶಾರೀರಿಕ ಭಾಷಾಭಿವ್ಯಕ್ತಿ ಅವರಲ್ಲಿರುವುದನ್ನು ಸುಲಭವಾಗಿ ಕಾಣಬಹುದಾಗಿದೆ.
ಸಂಗೀತ ಕ್ಷೇತ್ರದಲ್ಲಿ ಎಸ್ಪಿಬಿ ಸಾಧನೆ:
ಕನ್ನಡದ ಸಾಹಿತಿ ಉಪೇಂದ್ರ ಕುಮಾರ್ ಅವರಿಗಾಗಿ 12 ಗಂಟೆಗಳಲ್ಲಿ ಎಸ್ಪಿಬಿ 21 ಕನ್ನಡ ಹಾಡುಗಳನ್ನು ಹಾಡಿ ರೆಕಾರ್ಡ್ ಮಾಡಿದ್ದರು. ಒಂದೇ ದಿನದಲ್ಲಿ ತಮಿಳು ಹಾಗೂ ತೆಲುಗಿನಲ್ಲಿ 19 ಹಾಡುಗಳನ್ನೂ ರೆಕಾರ್ಡ್ ಮಾಡಿದ್ದರು. ಅಂತೆಯೇ ಹಿಂದಿಯಲ್ಲಿ 16 ಹಾಡುಗಳನ್ನು ಧ್ವನಿ ಮುದ್ರಿಸಿದ್ದರಂತೆ. ಇದು ಎಸ್ ಪಿ ಬಿ ಅವರ ಸಾಮರ್ಥ್ಯ ಹಾಗೂ ಅವರಿಗಿದ್ದ ಬೇಡಿಕೆಗೆ ನಿದರ್ಶನ.
ವಿವಿಧ ಭಾಷೆಗಳಲ್ಲಿ 45 ಸಾವಿರಕ್ಕೂ ಹೆಚ್ಚು ಹಾಡಿರುವ ಗಾಯಕ ಬಾಲಸುಬ್ರಹ್ಮಣ್ಯಂ. ಅತಿ ಹೆಚ್ಚು ಹಾಡು ಹಾಡಿರುವ ಕಾರಣದಿಂದಲೇ ಅವರ ಹೆಸರು ಗಿನ್ನೆಸ್ ರೆಕಾರ್ಡ್ ಪುಸ್ತಕ ಸೇರಿದೆ. ವರ್ಷದಲ್ಲಿ 930 ಹಾಡುಗಳು ಅಂದರೆ, ದಿನಕ್ಕೆ ಅಂದಾಜು 3 ಹಾಡುಗಳು ಎಂದರೂ 2018ರ ಹೊತ್ತಿಗೆ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಇಷ್ಟೇ ಅಲ್ಲದೆ ಹಲವಾರು ಖಾಸಗಿ ಆಲ್ಬಂಗಳೂ ಇವರ ಖಾತೆಯಲ್ಲಿವೆ.
ಪಡೆದ ಪ್ರಶಸ್ತಿಗಳ ವಿವಿರ:
ಎಸ್ಪಿಬಿ ನಾಲ್ಕು ಭಾಷೆಗಳಲ್ಲಿ 6 ರಾಷ್ಟ್ರ ಪ್ರಶಸ್ತಿ ಪಡೆದ ಕೆಲವೇ ಕೆಲವು ಗಾಯಕರಲ್ಲಿ ಒಬ್ಬರು. ತೆಲುಗಿನ ಸಾಗರ ಸಂಗಮಂ, ರುದ್ರವೀಣಾ ಹಾಗೂ ಶಂಕರಾಭರಣಂ, ತಮಿಳಿನ ಮಿನ್ಸಾರೆ ಕನವು, ಕನ್ನಡದ ಸಂಗೀತ ಸಾಗರ ಪಂಚಾಕ್ಷರಿ ಗವಾಯಿ ಸಿನಿಮಾಗಳಿಗೆ ಒಟ್ಟು 6 ರಾಷ್ಟ್ರೀಯ ಪ್ರಶಸ್ತರಿ ಪಡೆದಿದ್ದಾರೆ. ಉಳಿದಂತೆ ಬಾಲಿವುಡ್ನ ಫಿಲ್ಮ್ಫೇರ್ ಪ್ರಶಸ್ತಿ, 25 ನಂದಿ ಅವಾರ್ಡ್, ಪದ್ಮಶ್ರೀ (2001), ಪದ್ಮಭೂಷಣ(2011) ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ದಕ್ಷಿಣ ಭಾರತದ ಕನ್ನಡ, ತೆಲುಗು ಹಾಗೂ ತಮಿಳು ಚಿತ್ರರಂಗಗಳಲ್ಲಿ ಅವರದ್ದು ಅದ್ವಿತೀಯ ಸಾಧನೆ. ಗಾಯನವಷ್ಟೇ ಅಲ್ಲದೆ, ನಟನೆ, ಸಂಗೀತ ಸಂಯೋಜನೆ, ಚಲನಚಿತ್ರ ನಿರ್ಮಾಣ, ಧ್ವನಿದಾನ, ಸಂಗೀತ ಕಾರ್ಯಕ್ರಮಗಳ ನಿರ್ವಹಣೆ ಮುಂತಾದವುಗಳಲ್ಲೂ ಸಾಧನೆ ಮಾಡಿದ್ದಾರೆ. ಇವರ ನಿರ್ವಹಣೆಯಲ್ಲಿ ಮೂಡಿ ಬರುತ್ತಿದ್ದ ‘ಎದೆ ತುಂಬಿ ಹಾಡಿದೆನು’ ಕಾರ್ಯಕ್ರಮವಂತೂ ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿಯೇ ಉಳಿದಿದೆ.
Comments are closed.