ಬಲ್ಲಿಯಾ: ಸಮಾಜದಲ್ಲಿ ಹೆತ್ತವರು ತಮ್ಮ ಪುತ್ರಿಯರಿಗೆ ಸಭ್ಯತೆಯಿಂದ ವರ್ತಿಸುವುದನ್ನು ಕಲಿಸಿದರೆ ಅತ್ಯಾಚಾರ ಪ್ರಕರಣಗಳನ್ನು ನಿಲ್ಲಿಸಲು ಸಾಧ್ಯ ಎಂದು ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ.
ಅತ್ಯಾಚಾರ ಪ್ರಕರಣಗಳನ್ನು ಸಮಾಜದಲ್ಲಿ ನಿಲ್ಲಿಸಲು ನಮ್ಮ ಮಕ್ಕಳಿಗೆ ಉತ್ತಮ ಮೌಲ್ಯಗಳು, ಗುಣನಡತೆಯನ್ನು ಹೇಳಿಕೊಡಬೇಕೆ ಹೊರತು ಅದು ಸರ್ಕಾರದ ಉತ್ತಮ ಆಡಳಿತ ಅಥವಾ ಕತ್ತಿ, ಗುರಾಣಿಯಿಂದಲ್ಲ. ಸುಸಂಸ್ಕೃತ ಪರಿಸರದಲ್ಲಿ ತಮ್ಮ ಹೆಣ್ಣು ಮಕ್ಕಳನ್ನು ಬೆಳೆಸುವುದು ಪ್ರತಿಯೊಬ್ಬ ಪೋಷಕರ ಧರ್ಮ. ಮಕ್ಕಳು ಸಭ್ಯತೆಯಿಂದ ವರ್ತಿಸುವುದನ್ನು ಹೇಳಿಕೊಡಬೇಕು ಎಂದು ಹತ್ರಾಸ್ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡುವಾಗ ತಿಳಿಸಿದ್ದಾರೆ.
ಜನರಿಗೆ, ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವುದು ಸರ್ಕಾರದ ಧರ್ಮವಾದರೆ, ಮಕ್ಕಳಿಗೆ ಉತ್ತಮ ಮೌಲ್ಯ ಹೇಳಿಕೊಡುವುದು ಕುಟುಂಬದಲ್ಲಿ ಪೋಷಕರು, ಹಿರಿಯರ ಧರ್ಮವಾಗಿರುತ್ತದೆ. ಸರ್ಕಾರ ಮತ್ತು ಜನರ ಉತ್ತಮ ಮೌಲ್ಯಗಳಿಂದ ಒಂದು ಸುಂದರ ದೇಶ ನಿರ್ಮಾಣವಾಗಲು ಸಾಧ್ಯ ಎಂದರು.
ಸಾಮೂಹಿಕ ಅತ್ಯಾಚಾರಕ್ಕೀಡಾಗಿದ್ದ ಉತ್ತರ ಪ್ರದೇಶದ ಹತ್ರಾಸ್ ನ 19 ವರ್ಷದ ದಲಿತ ಮಹಿಳೆ ಕಳೆದ ಸೆಪ್ಟೆಂಬರ್ 29ರಂದು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಪ್ರಕರಣದ ಎಲ್ಲಾ ನಾಲ್ವರು ಆರೋಪಿಗಳು ಬಂಧಿತರಾಗಿದ್ದಾರೆ.
ಕೇಸಿನ ವಿಚಾರಣೆ ನಡೆಸಲು ಉತ್ತರ ಪ್ರದೇಶ ಸರ್ಕಾರ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಿದ್ದು ತ್ವರಿತ ವಿಚಾರಣೆ ನ್ಯಾಯಾಲಯದಲ್ಲಿ ಪ್ರಕರಣದ ತನಿಖೆ ನಡೆಸಲಾಗುತ್ತದೆ.
Comments are closed.