ರಾಷ್ಟ್ರೀಯ

15 ವರ್ಷಗಳ ಹಿಂದೆ ಕಾಣೆಯಾಗಿದ್ದ ಪೊಲೀಸ್ ಅಧಿಕಾರಿ ಪತ್ತೆಯಾಗಿದ್ದು ಫುಟ್‌ಪಾತ್‌ನಲ್ಲಿ !

Pinterest LinkedIn Tumblr

ಗ್ವಾಲಿಯರ್: 2005ರಲ್ಲಿ ಡಾಟಿಯಾದಲ್ಲಿ ಕಾಣೆಯಾಗಿದ್ದ ಪೊಲೀಸ್ ಅಧಿಕಾರಿಯೊಬ್ಬರು ಈಗ ಪತ್ತೆಯಾಗಿದ್ದು, ಅವರನ್ನು ಗ್ವಾಲಿಯರ್ ಫುಟ್‌ಪಾತ್‌ನಲ್ಲಿ ಕಂಡ ಇಬ್ಬರು ಸಹೋದ್ಯೋಗಿಗಳು ಶಾಕ್ ಆಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು…? ಮುಂದೆ ಓದಿ….

ಒಂದು ಕಾಲದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಮನೀಶ್ ಮಿಶ್ರಾ ಎಂಬವರು 15 ವರ್ಷಗಳ ನಂತರ ಭಿಕ್ಷುಕನಂತೆ ತಮ್ಮ ಸಹೋದ್ಯೋಗಿಗಳಿಗೆ ಆಕಸ್ಮಿಕವಾಗಿ ರಸ್ತೆಯಲ್ಲಿ ಸಿಕ್ಕಿದ್ದು, ಈ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ಬೆಳಕಿಗೆ ಬಂದಿದೆ.

ಅಂದ ಹಾಗೆ, ಫೋಟೋದಲ್ಲಿ ಕೊಳಕಾದ ಮೈ, ಉದ್ದ ಗಡ್ಡ-ಮೀಸೆಯಲ್ಲಿ ರಸ್ತೆ ಬದಿ ಭಿಕ್ಷುಕನಂತೆ ಕಾಣಸಿಗುವ ಈ ವ್ಯಕ್ತಿ ಅಸಲಿಗೆ ಮಾಜಿ ಪೊಲೀಸ್ ಅಧಿಕಾರಿ ಮನೀಶ್ ಮಿಶ್ರಾ. ಯಾರು ಊಹಿಸಲಾಗದಂತಹ ಸ್ಥಿತಿಗೆ ಇವರು ಇಂದು ತಲುಪಿದ್ದಾರೆ.

ಉಪ ಪೊಲೀಸ್ ವರಿಷ್ಠಾಧಿಕಾರಿಗಳಾದ ರತ್ನೇಶ್ ಸಿಂಗ್ ತೋಮರ್ ಮತ್ತು ವಿಜಯ್ ಸಿಂಗ್ ಬಹದ್ದೂರ್ ಕಳೆದ ಮಂಗಳವಾರ ರಾತ್ರಿ ನಗರದ ಕಲ್ಯಾಣ ಮಂಟಪದ ಬಳಿ ಹೋಗುತ್ತಿದ್ದಾಗ ಭಿಕ್ಷುಕನಂತೆ ಕಂಡ ವ್ಯಕ್ತಿಯೊಬ್ಬ ಚಳಿಯಿಂದ ನಡುಗುತ್ತಿದ್ದದ್ದು ಕಂಡುಬಂತು. ಇದನ್ನು ಕಂಡ ಅಧಿಕಾರಿಗಳು ಗಾಡಿಯಿಂದ ಇಳಿದು ಆತನಿಗೆ ಜಾಕೇಟ್ ನೀಡಲು ಮುಂದಾದರು. ಆಗ ಆ ವ್ಯಕ್ತಿ ತಮ್ಮ ಮೊದಲ ಹೆಸರಿನಿಂದ ಇವರನ್ನು ಕರೆದಾಗ ಇಬ್ಬರು ಅಧಿಕಾರಿಗಳಿಗೆ ಫುಲ್​ ಶಾಕ್​!. ಕೂಡಲೇ ಅವರಿಗೆ ಅರೇ, ಇದು ಬೇರೆ ಯಾರೂ ಅಲ್ಲ ಮನೀಶ್​ ಎಂದು ಗೊತ್ತಾಗಿದೆ.

ಒಂದು ಕಾಲದಲ್ಲಿ ಮಿಶ್ರಾ ಉತ್ತಮ ಕ್ರೀಡಾಪಟು ಮತ್ತು ಶಾರ್ಪಶೂಟರ್ ಆಗಿದ್ದರು. 1999ರಲ್ಲಿ ಪೊಲೀಸ್ ಪಡೆಗೆ ಸೇರಿದ್ದ ಮನೀಶ್​ ಅಸಲಿಗೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. 2005ರಲ್ಲಿ ಡಾಟಿಯಾದಲ್ಲಿ ಇನ್​ಸ್ಪೆಕ್ಟ​ರ್​ ಆಗಿ ನೇಮಕಗೊಂಡಾದ ಬಳಿಕ ನಾಪತ್ತೆಯಾಗಿದ್ದರು. ಇಷ್ಟು ವರ್ಷಗಳ ಕಾಲ ಅವರು ಎಲ್ಲಿದ್ದರೂ ಎಂಬ ಸುಳಿವು ಸಹ ಯಾರಿಗೂ ಸಿಕ್ಕಿರಲಿಲ್ಲ. ಸದ್ಯ, ಅವರ ಸ್ನೇಹಿತರು ಮಿಶ್ರಾಗೆ ಉತ್ತಮ ಚಿಕಿತ್ಸೆ ಕೊಡಿಸಿದ್ದು, ಮನೀಶ್​ ಆದಷ್ಟು ಬೇಗ ಮೊದಲಿನಂತೆ ಆಗುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

Comments are closed.