ನವದೆಹಲಿ: ದೇಶದಲ್ಲಿ 1975ರಲ್ಲಿ ವಿಧಿಸಲಾಗಿದ್ದ ತುರ್ತು ಪರಿಸ್ಥಿತಿಯನ್ನು ‘ಅಸಾಂವಿಧಾನಿಕ’ ಎಂದು ಘೋಷಿಸಬೇಕು ಮತ್ತು ತಮಗೆ 25 ಕೋಟಿ ಪರಿಹಾರ ನೀಡಬೇಕು ಎಂದು ಕೋರಿ 94 ವರ್ಷದ ಮಹಿಳೆಯೊಬ್ಬರು ಸಲ್ಲಿಸಿರುವ ಅರ್ಜಿ ಕುರಿತು ಆಶ್ಚರ್ಯ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಈ ಹಂತದಲ್ಲಿ ಅರ್ಜಿ ವಿಚಾರಣೆಗೆ ಪರಿಗಣಿಸಬಹುದು ಎಂದು ಹೇಳಿದೆ.
ವೀಣಾ ಸರೀನ್ ಎಂಬುವರು ಸಲ್ಲಿಸಿರುವ ಈ ಅರ್ಜಿಯನ್ನು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ ಪರಿಗಣಿಸಿದ್ದು, ಡಿಸೆಂಬರ್ 14 ರಂದು ವಿಚಾರಣೆ ನಡೆಸುವುದಾಗಿ ತಿಳಿಸಿತು.
‘ತುರ್ತು ಪರಿಸ್ಥಿತಿ ಘೋಷಿಸಿದ 30-35 ವರ್ಷಗಳ ನಂತರ ಸಲ್ಲಿಸಿರುವ ಇದು ಯಾವ ರೀತಿಯ ಅರ್ಜಿ’ ಎಂದೂ ನ್ಯಾಯಪೀಠ ಆಶ್ಚರ್ಯ ವ್ಯಕ್ತಪಡಿಸಿತು.
‘ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನನ್ನ ಪತಿಯ ಒಡೆತನದ, ನವದೆಹಲಿಯ ಕರೋಲ್ ಬಾಗ್ ಮತ್ತು ಕನಾಟ್ ಪ್ಲೇಸ್‌ನಲ್ಲಿದ್ದ ಆಸ್ತಿಯನ್ನು ಹಾಗೂ ಬೆಲೆ ಬಾಳುವ ವಸ್ತುಗಳನ್ನು ಅಧಿಕಾರಿಗಳು ಬಲವಂತವಾಗಿ ಮುಟ್ಟುಗೋಲು ಹಾಕಿಕೊಂಡಿದ್ದರು. ಆ ಸಮಯದಲ್ಲಿ ನಮಗೆ ಬೆದರಿಕೆ ಹಾಕಲಾಗಿತ್ತು’ ಎಂದು ಸರೀನ್ ಅವರು ಅರ್ಜಿಯಲ್ಲಿ ಆರೋಪಿಸಿದ್ದಾರೆ.
Comments are closed.